ADVERTISEMENT

ಸೇನೆ ದುರ್ಬಳಕೆಗೆ ನಿವೃತ್ತರ ಆಕ್ಷೇಪ

ರಾಷ್ಟ್ರಪತಿಗೆ ಪತ್ರ ಬರೆದ ನಿವೃತ್ತ ಸೇನಾಧಿಕಾರಿಗಳು * ಪತ್ರ ಬಂದೇ ಇಲ್ಲ ಎಂದ ರಾಷ್ಟ್ರಪತಿ ಭವನ

ಕಲ್ಯಾಣ್‌ ರೇ
Published 12 ಏಪ್ರಿಲ್ 2019, 20:55 IST
Last Updated 12 ಏಪ್ರಿಲ್ 2019, 20:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಕ್ಷಣಾ ಪಡೆಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ವಿಚಾರ ಈಗ ಮತ್ತೊಂದು ತಿರುವು ಪಡೆದಿದೆ.‘ಚುನಾವಣಾ ಉದ್ದೇಶಕ್ಕೆ ಸೇನಾಪಡೆಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿ’ ಎಂದು ಸೇನೆಯ ಎಂಟು ಮಂದಿ ನಿವೃತ್ತ ಮುಖ್ಯಸ್ಥರೂ ಸೇರಿ 156 ನಿವೃತ್ತ ಸೇನಾಧಿಕಾರಿಗಳು ರಾಷ್ಟ್ರಪತಿಗೆ ಬರೆದಿದ್ದಾರೆ ಎನ್ನಲಾದ ಪತ್ರವು ಈಗ ವಿವಾದದ ಸ್ವರೂಪ ಪಡೆದಿದೆ.

ಯಾರು ಈ ಪತ್ರವನ್ನು ರಾಷ್ಟ್ರಪತಿ ಭವನಕ್ಕೆ ತಲುಪಿಸಿದ್ದಾರೆ ಮತ್ತು ಯಾವಾಗ ತಲುಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಪತ್ರದ ಪ್ರತಿಯು ಗುರುವಾರ ತಡರಾತ್ರಿ ಮಾಧ್ಯಮಗಳಿಗೆ ಲಭ್ಯವಾಗಿದೆ. ಚುನಾವಣಾ ಆಯೋಗಕ್ಕೂ ಪತ್ರ ರವಾನಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಂತಹ ಯಾವುದೇ ಪತ್ರ ನಮಗೆ ಬಂದಿಲ್ಲ ಎಂದು ರಾಷ್ಟ್ರಪತಿ ಭವನ ಹೇಳಿದೆ. ಇ–ಮೇಲ್‌ ಮೂಲಕ ಪತ್ರ ಬಂದಿದೆಯೇ ಎಂದು ಪ್ರಶ್ನಿಸಿದ್ದಕ್ಕೆ ರಾಷ್ಟ್ರಪತಿ ಭವನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ADVERTISEMENT

ನಿವೃತ್ತ ಸೇನಾ ಮುಖ್ಯಸ್ಥರಾದ ಜನರಲ್ ಎಸ್‌.ಎಫ್‌.ರಾಡ್ರಿಗಸ್, ಜನರಲ್ ಶಂಕರ್ ರಾಯ್ ಚೌಧರಿ, ಜನರಲ್ ದೀಪಕ್ ಕಪೂರ್, ವಾಯುಪಡೆಯ ನಿವೃತ್ತ ಚೀಫ್ ಏರ್‌ ಮಾರ್ಷಲ್ ಎನ್‌.ಸಿ. ಸೂರಿ, ನೌಕಾಪಡೆಯ ನಿವೃತ್ತ ಅಡ್ಮಿರಲ್‌ಗಳಾದ ಎಲ್‌.ರಾಮದಾಸ್, ಅರುಣ್ ಪ್ರಕಾಶ್, ಮೆಹ್ತಾ, ವಿಷ್ಣು ಭಾಗವತ್ ಅವರ ಹೆಸರುಗಳು ಸಹಿ ಹಾಕಿದವರ ಪಟ್ಟಿಯಲ್ಲಿದೆ.

‘ಈ ಪತ್ರಕ್ಕೆ ನಾನು ಸಹಿ ಹಾಕಿಲ್ಲ’ ಎಂದು ನಿವೃತ್ತಜನರಲ್ ಎಸ್‌.ಎಫ್‌.ರಾಡ್ರಿಗಸ್ ಹೇಳಿದ್ದಾರೆ. ಸೂರಿ ಮತ್ತು ನಾಯ್ಡು ಸಹ ಸಹಿ ಮಾಡಿಲ್ಲ ಎಂದು ಹೇಳಿದ್ದರು. ಆದರೆ ನಂತರ ಸಹಿ ಮಾಡಿರುವುದಾಗಿ ಒಪ್ಪಿಕೊಂಡರು. ಸಹಿ ಹಾಕಿದವರ ಪಟ್ಟಿಯಲ್ಲಿ ಹೆಸರಿಸಲಾಗಿರುವ ಉಳಿದ ಎಲ್ಲರೂ‘ನಾನು ಸಹಿ ಮಾಡಿದ್ದೇನೆ’ ಎಂದು ಒಪ್ಪಿಕೊಂಡಿದ್ದಾರೆ.

ಯೋಧರ ನಿಂದಕರು ಸಾಯಲಿ: ಮೋದಿ ಆಕ್ರೋಶ
ಗಂಗಾವತಿ (ಕೊಪ್ಪಳ ಜಿಲ್ಲೆ): ‘ನಾವು ದೇಶ ಮೊದಲು ಎಂದರೆ ಇವರು ಕುಟುಂಬವೇ ಮೊದಲು ಎನ್ನುತ್ತಿದ್ದಾರೆ. ನಮ್ಮ ಸೈನಿಕರನ್ನು ಅವಮಾನಿಸುವವರು ಮುಳುಗಿ ಸಾಯಿರಿ’ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶದಿಂದ ವಿರೋಧಿಗಳಿಗೆ ಹಿಡಿಶಾಪ ಹೇಳಿದರು.

ಶುಕ್ರವಾರ ಇಲ್ಲಿ ಕೊಪ್ಪಳ, ರಾಯಚೂರು, ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರದಲ್ಲಿ ಮಾತನಾಡಿದ ಅವರು, ‘ಎರಡು ಹೊತ್ತು ಊಟಕ್ಕೆ ಗತಿ ಇಲ್ಲದವರು ಸೇನೆ ಸೇರುತ್ತಾರೆ ಎಂದು ಇಲ್ಲಿಯ ಮುಖ್ಯಮಂತ್ರಿ ಹೇಳುತ್ತಾರೆ. ಕುಮಾರಸ್ವಾಮಿ ಅವರೇ ಇದೆಂಥ ಮಾತು? ನಿಮ್ಮ ಮನಸ್ಸಿನಲ್ಲಿರುವುದನ್ನೇ ಹೇಳಿದ್ದೀರಿ ಬಿಡಿ’ ಎಂದು ವಾಗ್ದಾಳಿ ನಡೆಸಿದರು.

‘ಕುಟುಂಬ ರಾಜಕಾರಣದಲ್ಲಿಯೇ ಕಾಲ ಕಳೆದು ದೇಶವನ್ನು ಲೂಟಿ ಮಾಡಿದ ಇವರಿಗೆ ಚಳಿ, ಬಿಸಿಲು, ಮರುಭೂಮಿಯಲ್ಲಿ ಕೆಲಸ ಮಾಡುವ ಸೈನಿಕ ಕಷ್ಟ ಹೇಗೆ ಅರ್ಥವಾಗಬೇಕು? ಇವರೆಲ್ಲ ತುಕ್ಡೇ, ತುಕ್ಡೇ ಎಂದು ಹೇಳುವ ಪ್ರತ್ಯೇಕತಾವಾದಿಗಳ ಜೊತೆ ಗುರುತಿಸಿಕೊಂಡಿದ್ದಾರೆ’ ಎಂದು ಟೀಕಿಸಿದರು.

‘ಸೈನಿಕರಿಗೆ ಕಳಪೆ ಶಸ್ತ್ರಾಸ್ತ, ಕಳಪೆ ಬುಲೆಟ್‌ ಪ್ರೂಫ್‌ ಜಾಕೆಟ್‌ಗಳನ್ನು ಹಿಂದಿನ ಸರ್ಕಾರ ಪೂರೈಕೆ ಮಾಡಿತ್ತು. ಇವರು ಕ್ವಟ್ರೋಚಿ, ಮಿಷಲ್‌ ಮಾಮಾ ಮೂಲಕ ದೊಡ್ಡ–ದೊಡ್ಡ ಹಗರಣ ನಡೆಸಿದ್ದಾರೆ. ಅದು ಶೀಘ್ರ ಹೊರಬರಲಿದೆ’ ಎಂದರು.

ಕುಮಾರಸ್ವಾಮಿ ಹೇಳಿದ್ದೇನು?
ಬೆಂಗಳೂರು:
‘ಗಡಿ ಕಾಯುವ ಯಾರೊಬ್ಬರೂ ಶ್ರೀಮಂತರ ಮಕ್ಕಳಲ್ಲ. ಎರಡೊತ್ತಿನ ಊಟಕ್ಕೆ ಗತಿ ಇಲ್ಲದ, ಉದ್ಯೋಗ ಇಲ್ಲದ ಯುವಕರು ಅಂತಿಮವಾಗಿ ಸೇನೆ ಸೇರುತ್ತಾರೆ. ಅವರ ಬಾಳಿನೊಂದಿಗೆ ಚೆಲ್ಲಾಟವಾಡುತ್ತಿರುವ ಪ್ರಧಾನ ಮಂತ್ರಿ ಇವರು’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ತಮ್ಮ ಕುಟುಂಬ ಸಾಕುವ ಸಲುವಾಗಿ ಸೇನೆಗೆ ಸೇರಿದ್ದ ಗುರು ಎಂಬ ಯುವಕ ನರೇಂದ್ರ ಮೋದಿ ಅವರ ಕೆಟ್ಟ ಆಡಳಿತದಲ್ಲಾದ ಬಾಂಬ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡರು. ಆ ಕುಟುಂಬದ ಹೆಣ್ಣು ಮಕ್ಕಳ ಕಣ್ಣೀರನ್ನು ನೋಡಿ ನೋವು ಪಟ್ಟಿದ್ದೇವೆ' ಎಂದಿದ್ದಾರೆ.

ವಾಯು ದಾಳಿಯಿಂದ ಪಾಕಿಸ್ತಾನಕ್ಕೆ ನೋವಾಯಿತು ಎಂದು ಕಣ್ಣಿರು ಹಾಕಿಲ್ಲ. ದೇಶಪ್ರೇಮವನ್ನು ನರೇಂದ್ರ ಮೋದಿಗೆ ಗುತ್ತಿಗೆ ನೀಡಲಾಗಿದೆಯೇ’ ಎಂದು ಅವರು ಈ ವಿಡಿಯೊದಲ್ಲಿ ಪ್ರಶ್ನಿಸಿದ್ದಾರೆ.

‘ರಾಜ್ಯ ಬಿಜೆಪಿಯ ಕುತಂತ್ರಿ ಪೋಸ್ಟ್‌ಗೆ ನಾನು ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಆದರೂ ಪ್ರಧಾನಿ ಮೋದಿ ಅವರು ಈ ತಪ್ಪು ಮಾಹಿತಿಗಳನ್ನೇ ನೆಚ್ಚಿಕೊಂಡಿರುವುದು ವಿಷಾದನೀಯ. ಸೈನಿಕರು, ದೇಶಪ್ರೇಮದ ಹೆಸರಲ್ಲಿ ಲಾಭ ಮಾಡಿಕೊಳ್ಳುವ ಅವರ ನಡೆ ಖಂಡಿತಾ ಸರಿಯಲ್ಲ. ತಮ್ಮ ಸರ್ಕಾರದ ಹೇಳಿಕೊಳ್ಳುವ ಸಾಧನೆ ಏನೂ ಇಲ್ಲದ ಕಾರಣ ಇಂತಹ ಭಾವನಾತ್ಮಕ ವಿಷಯಗಳ ಮೊರೆ ಹೋಗಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

'ನಿಮಗೆ ಅರ್ಥವಾಗಲೆಂದೇ ನೀವೇ ಕನ್ನಡದಲ್ಲಿ ಮಾತನಾಡಿದ ವಿಡಿಯೋವನ್ನು ಹಾಕಿದ್ದೇವೆ. ನಿಮಗೆ ಕನ್ನಡ ಅರ್ಥವಾಗದಿದ್ದರೆ ಕನ್ನಡದ ಮೇಷ್ಟ್ರು ಸಿದ್ದರಾಮಯ್ಯ ಅವರನ್ನು ಕೇಳಿ ತಿಳಿದುಕೊಳ್ಳಿ. ಇದರಲ್ಲಾದರೂ ನೀವು ಮತ್ತು ಅವರು 'ಸಮನ್ವಯ' ಸಾಧಿಸುವಂತಾಗಲಿ’ ಎಂದು ‘ಬಿಜೆಪಿ ಕರ್ನಾಟಕ’ ಟ್ವೀಟ್‌ ಮಾಡಿ ತಿರುಗೇಟು ನೀಡಿದೆ.

*
ಪತ್ರದ ವಿಚಾರ ಬಹಳ ದಿನಗಳ ಹಿಂದೆಯೇ ನಡೆದಿದೆ. ಪತ್ರಕ್ಕೆ ಸಹಿ ಹಾಕಿಲ್ಲ ಎನ್ನುತ್ತಿರುವವರು, ಸಹಿ ಹಾಕಿರುವುದಕ್ಕೆ ನನ್ನ ಬಳಿ ಸಾಕ್ಷ್ಯಗಳಿವೆ.
-ಎಲ್‌.ರಾಮದಾಸ್, ನಿವೃತ್ತ ಅಡ್ಮಿರಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.