ನವದೆಹಲಿ: ಪತ್ರಕರ್ತರ ವಿರುದ್ಧ ಕ್ರೂರ ಕಾನೂನುಗಳ ಬಳಕೆ ಮಾಡುತ್ತಿರುವುದು ಹೆಚ್ಚುತ್ತಿದೆ. ತಕ್ಷಣವೇ ರಾಷ್ಟ್ರಪತಿ ಮಧ್ಯಪ್ರವೇಶಿಸಿ ಮಾಧ್ಯಮ ಸ್ವಾತಂತ್ರ್ಯ ಮತ್ತು ಪತ್ರಕರ್ತರ ವೃತ್ತಿ ಹಾಗೂ ಬದುಕನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಎಂಟು ಮಾಧ್ಯಮ ಸಂಘಟನೆಗಳು ಮತ್ತು ವಕೀಲರ ಸಂಘಟನೆ ಜಂಟಿಯಾಗಿ ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿವೆ.
ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಪ್ರೆಸ್ ಅಸೋಸಿಯೇಷನ್, ಇಂಡಿಯನ್ ವುಮೆನ್ ಪ್ರೆಸ್ ಕಾಪ್ಸ್, ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್, ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್, ಡಿಜಿಪಬ್, ಫಾರಿನ್ ಕರೆಸ್ಪಾಂಡೆಂಟ್ ಕ್ಲಬ್, ವೆಟರನ್ ಜರ್ನಲಿಸ್ಟ್ ಗ್ರೂಪ್ ಮತ್ತು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಈ ಪತ್ರಕ್ಕೆ ಸಹಿ ಮಾಡಿವೆ.
ಪತ್ರಕರ್ತರ ವಿರುದ್ಧ ಬಳಸುತ್ತಿರುವ ಕಾನೂನುಗಳು ಜಾಮೀನಿಗೆ ಅವಕಾಶ ಕಲ್ಪಿಸುವುದಿಲ್ಲ. ಇವುಗಳಲ್ಲಿ ಜೈಲು ವಾಸ ಕಾಯಂ ಆಗಿದೆ. ಅಲ್ಲದೆ, ಮಾಧ್ಯಮ ಪ್ರತಿನಿಧಿಗಳು ತಮ್ಮ ವೃತ್ತಿಗೆ ಪ್ರಮುಖವಾಗಿ ಬಳಸುವ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಹಾರ್ಡ್ ಡಿಸ್ಕ್‌ಗಳಂತಹ ಸಾಧನಗಳನ್ನು ವಶಪಡಿಸಿಕೊಳ್ಳಲು ಅಧಿಕಾರಿಗಳು ಕೆಲವು ಕಠಿಣ ಕಾನೂನುಗಳ ಅಡಿಯಲ್ಲಿ ತಮ್ಮ ‘ಅನಿರ್ಬಂಧಿತ ಹಕ್ಕು’ ಬಳಸಿಕೊಂಡಿದ್ದಾರೆ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ಈ ಪತ್ರದಲ್ಲಿ ನಿರ್ದಿಷ್ಟ ಪ್ರಕರಣದ ನಿದರ್ಶನ ಉಲ್ಲೇಖಿಸಿಲ್ಲ. ಆದರೆ, ಇತ್ತೀಚೆಗೆ ನ್ಯೂಸ್‌ಕ್ಲಿಕ್ ಸಂಸ್ಥಾಪಕ-ಸಂಪಾದಕ ಪ್ರಬೀರ್ ಪುರಕಾಯಸ್ಥ ಮತ್ತು ಆ ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಯುಎಪಿಎ ಅಡಿಯಲ್ಲಿ ಬಂಧಿಸಿ, 44 ಇತರ ಪತ್ರಕರ್ತರಿಗೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಕ್ಕಾಗಿ ಈ ಪತ್ರ ಬರೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.