ನವದೆಹಲಿ: ಹುಟ್ಟಿನಿಂದ ಮಹಿಳೆಯಾಗಿದ್ದು ನಂತರ ಪುರುಷನಾಗಿ ಲಿಂಗ ಪರಿವರ್ತನೆಯಾಗಿರುವ ಭಾರತೀಯ ಕಂದಾಯ ಸೇವೆಯ (ಐಆರ್‌ಎಸ್) ಹಿರಿಯ ಮಹಿಳಾ ಅಧಿಕಾರಿ ಎಂ. ಅನಸೂಯಾ ಅವರಿಗೆ, ಸರ್ಕಾರಿ ದಾಖಲೆಗಳಲ್ಲಿ ತನ್ನ ಇಚ್ಛೆಯಂತೆ ಲಿಂಗ ಮತ್ತು ಹೆಸರು ನಮೂದಿಸಿಕೊಳ್ಳಲು ಕೇಂದ್ರ ಹಣಕಾಸು ಸಚಿವಾಲಯವು ಒಪ್ಪಿಗೆ ನೀಡಿದ್ದನ್ನು LGBTQIA+ ಕಾರ್ಯಕರ್ತರು ಸ್ವಾಗತಿಸಿದ್ದಾರೆ.
2013ರ ತಂಡದ ಐಆರ್‌ಎಸ್ (ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆಗಳು) ಅಧಿಕಾರಿಯಾಗಿರುವ ಸದ್ಯ ಹೈದರಾಬಾದ್‌ನಲ್ಲಿರುವ ಕಸ್ಟಮ್ಸ್‌ನ ಮುಖ್ಯ ಆಯುಕ್ತರ ಕಚೇರಿಯಲ್ಲಿ ಜಂಟಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅನಸೂಯಾ ಎಂಬ ಹೆಸರನ್ನು ದಾಖಲೆಗಳಲ್ಲಿ ಅನುಕತಿರ್ ಸೂರ್ಯ ಆಗಿ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಲಿಂಗ ಕಾಲಂನಲ್ಲಿ ಪುರುಷನೆಂದು ನಮೂದಿಸಬೇಕು ಎಂಬ ಇವರ ಕೋರಿಕೆಯನ್ನು ಸರ್ಕಾರ ಮಾನ್ಯ ಮಾಡಿತ್ತು.
‘ಲಿಂಗ ಎನ್ನುವುದು ಪ್ರತಿಯೊಬ್ಬರ ಆಯ್ಕೆಯಾಗಿದ್ದು, ಅದನ್ನು ಹೊಂದಲು ಪ್ರತಿಯೊಬ್ಬರಿಗೂ ಹಕ್ಕಿದೆ. ಈ ನಿರ್ಣಯವು ದೇಶದ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಇತರ ಇಲಾಖೆಗಳಲ್ಲೂ ಪ್ರತಿಧ್ವನಿಸುವ ವಿಶ್ವಾಸವಿದೆ’ ಎಂದು ಈ ಸಮುದಾಯದ ಶರೀಫ್ ಡಿ. ರಂಗನೇಕರ್ ಹೇಳಿದ್ದಾರೆ.
‘ಸರ್ಕಾರ ಎಂಬುದು ದೇಶದ ಜನರಿಗೆ ನೌಕರಿ ನೀಡುವ ಅತಿ ದೊಡ್ಡ ಸಂಸ್ಥೆಯಾಗಿದೆ. ವ್ಯಕ್ತಿಯ ಲಿಂಗತ್ವ, ಲಿಂಗ ಹಾಗೂ ಆಯ್ಕೆಯ ವಿಷಯದಲ್ಲಿ ಸರ್ಕಾರದ ಈ ಕ್ರಮ ಒಂದು ಉತ್ತಮ ಉದಾಹರಣೆಯಾಗಿ ಗುರುತಿಸಿಕೊಳ್ಳಲಿದೆ. ಹೀಗಾಗಿ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ’ ಎಂದು ಅವರು ಹೇಳಿದ್ದಾರೆ.
2015ರಲ್ಲಿ ಒಡಿಶಾದ ಹಣಕಾಸು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಐಶ್ವರ್ಯ ರುತುಪರ್ಣ ಪ್ರಧಾನ್ ಎಂಬುವವರು ಲಿಂಗತ್ವ ಅಲ್ಪಸಂಖ್ಯಾತರಾಗಿ ತಮ್ಮ ಗುರುತನ್ನು ಸರ್ಕಾರಿ ದಾಖಲೆಗಳಲ್ಲಿ ಬದಲಾಯಿಸಿದ್ದರು. ಸದ್ಯ ಇವರು ಒಡಿಶಾದ ವಾಣಿಜ್ಯ ಇಲಾಖೆ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.