ADVERTISEMENT

ಕಳಪೆ ಗುಣಮಟ್ಟದ ಔಷಧ ತಯಾರಿ: 18 ಔಷಧ ಕಂಪನಿಗಳ ಪರವಾನಗಿ ರದ್ದು

ಕಳಪೆ ಗುಣಮಟ್ಟದ ಔಷಧ ತಯಾರಕರ ವಿರುದ್ಧ ಕಠಿಣ ಕ್ರಮ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 2:47 IST
Last Updated 29 ಮಾರ್ಚ್ 2023, 2:47 IST
   

ನವದೆಹಲಿ: ಕಳಪೆ ಗುಣಮಟ್ಟದ ಔಷಧಗಳನ್ನು ತಯಾರಿಸುವ ಕಂಪನಿಗಳ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಹಾಗೂ ಕೆಲವು ರಾಜ್ಯ ಸರ್ಕಾರಗಳು, 76 ಕಂಪನಿಗಳಿಗೆ ಸೇರಿದ ಸ್ಥಳಗಳಲ್ಲಿ ಜಂಟಿ ತಪಾಸಣೆ ನಡೆಸಿವೆ. ನಕಲಿ ಮತ್ತು ಕಳಪೆ ಗುಣಮಟ್ಟದ ಔಷಧ ತಯಾರಿಸುತ್ತಿದ್ದ ಆರೋಪದ ಅಡಿ 18 ಕಂಪನಿಗಳ ಪರವಾನಗಿಯನ್ನು ರದ್ದುಮಾಡಿವೆ.

ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 15 ದಿನಗಳಿಂದ ಈ ಕಾರ್ಯಾಚರಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಪರವಾನಗಿ ರದ್ದು ಮಾಡಿರುವ ಕಂಪನಿಗಳ ಹೆಸರು ತಿಳಿದುಬಂದಿಲ್ಲ.

ಕಳಪೆ ಗುಣಮಟ್ಟದ ಔಷಧಗಳನ್ನು ತಯಾರಿಸುತ್ತಿದ್ದ 76 ಕಂಪನಿಗಳ ಮೇಲೆ ಮೊದಲ ಹಂತದಲ್ಲಿ ಕ್ರಮ ಜರುಗಿಸಲಾಗಿದೆ. 18 ಕಂಪನಿಗಳ ಪರವಾನಗಿ ರದ್ದು ಮಾಡಿರುವುದಲ್ಲದೆ, 26 ಕಂಪನಿಗಳಿಗೆ ಷೋಕಾಸ್ ನೋಟಿಸ್ ಜಾರಿಮಾಡಲಾಗಿದೆ. ಮೂರು ಕಂಪನಿಗಳ ಕೆಲವು ಉತ್ಪನ್ನಗಳಿಗೆ ನೀಡಿದ್ದ ಅನುಮತಿಯನ್ನು ರದ್ದು ಮಾಡಲಾಗಿದೆ ಎಂದು ಮೂಲಗಳು ವಿವರಿಸಿವೆ.

ADVERTISEMENT

ಕಳಪೆ ಗುಣಮಟ್ಟದ ಔಷಧಗಳ ವಿರುದ್ಧದ ವಿಶೇಷ ಅಭಿಯಾನದ ಭಾಗವಾಗಿ ಕಾನೂನು ಜಾರಿ ಸಂಸ್ಥೆಗಳು ಒಟ್ಟು 203 ಕಂಪನಿಗಳನ್ನು ಗುರುತಿಸಿವೆ. ಈ ಪೈಕಿ ಹೆಚ್ಚಿನ ಕಂಪನಿಗಳು ಹಿಮಾಚಲ ಪ್ರದೇಶದಲ್ಲಿ (70) ಇವೆ. ಉತ್ತರಾಖಂಡ (45) ಮತ್ತು ಮಧ್ಯಪ್ರದೇಶದಲ್ಲಿಯೂ (23) ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಗಳನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತಪಾಸಣೆ ನಡೆಸಲಾಗುತ್ತದೆ ಎಂದು ಗೊತ್ತಾಗಿದೆ.

ಭಾರತ ಮೂಲದ ಕಂಪನಿಗಳು ಸಿದ್ಧಪಡಿಸುವ ಔಷಧಗಳ ಗುಣಮಟ್ಟದ ಬಗ್ಗೆ ಈಚಿನ ದಿನಗಳಲ್ಲಿ ಪ್ರಶ್ನೆಗಳು ಮೂಡಿವೆ. ತಮಿಳು ನಾಡು ಮೂಲದ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಕಂಪನಿಯು ತಾನು ಸಿದ್ಧಪಡಿಸಿದ ಕಣ್ಣಿನ ಡ್ರಾಪ್ಸ್‌ಗಳನ್ನು ಫೆಬ್ರುವರಿಯಲ್ಲಿ ಹಿಂಪಡೆದಿತ್ತು. ಈ ಡ್ರಾಪ್ಸ್‌ಗಳಿಗೂ ಅಮೆರಿಕ ದಲ್ಲಿ ಕೆಲವರು ದೃಷ್ಟಿ ಕಳೆದುಕೊಂಡಿರುವುದಕ್ಕೂ ಸಂಬಂಧ ಇದೆ ಎಂಬ ಆರೋಪ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.