ADVERTISEMENT

ದೇಶದ ಮುಂಚೂಣಿ ಕಮ್ಯುನಿಸ್ಟ್ ನಾಯಕ ಸೀತಾರಾಮ್ ಯೆಚೂರಿಗೆ ಅಂತಿಮ ‘ಲಾಲ್ ಸಲಾಂ’

ಶಮಿನ್‌ ಜಾಯ್‌
Published 12 ಸೆಪ್ಟೆಂಬರ್ 2024, 21:12 IST
Last Updated 12 ಸೆಪ್ಟೆಂಬರ್ 2024, 21:12 IST
<div class="paragraphs"><p>ಸೀತಾರಾಮ್ ಯೆಚೂರಿ </p></div>

ಸೀತಾರಾಮ್ ಯೆಚೂರಿ

   

–ಪಿಟಿಐ ಚಿತ್ರ

ನವದೆಹಲಿ: ದೇಶದ ಮುಂಚೂಣಿ ಕಮ್ಯುನಿಸ್ಟ್ ನಾಯಕ ಸೀತಾರಾಮ್ ಯೆಚೂರಿ ಅವರಿಗೆ ಜೀವನವು ಅಂತಿಮ ‘ಲಾಲ್ ಸಲಾಂ’ ಹೇಳುವ ಹೊತ್ತಿಗೆ, ಅವರು ದೇಶದ ದುಡಿಯುವ ವರ್ಗಕ್ಕಾಗಿ ಹಾಗೂ ಧರ್ಮನಿರಪೇಕ್ಷ ಭಾರತಕ್ಕಾಗಿ ಐದು ದಶಕಗಳ ತಮ್ಮ ಬದುಕನ್ನು ಸವೆಸಿ ಆಗಿತ್ತು.

ADVERTISEMENT

ಯುವಕರಿಗೆ ಹಾಗೂ ಹಳಬರಿಗೆ ಅವರು ‘ಸೀತಾರಾಮ್’ ಆಗಿದ್ದರು. ಭಿನ್ನ ಹಿನ್ನೆಲೆಗಳ ಸ್ನೇಹಿತರ ಪಾಲಿಗೆ ಅವರು ‘ಸೀತಾ’ ಆಗಿದ್ದರು. ಫ್ಯಾಸಿಸ್ಟ್ ವಿರೋಧಿ ಸಂಸದೀಯ ಪಟು ಹಾಗೂ ಮೈತ್ರಿಕೂಟಗಳನ್ನು ಕಟ್ಟುವ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಪಡೆಯುವ ಮೊದಲು ಅವರು ಹಲವು ಪಾತ್ರಗಳನ್ನು ನಿಭಾಯಿಸಿದರು. ದೇಶದ ಎರಡು ಸರ್ಕಾರಗಳ ನಡೆ–ನುಡಿಗಳನ್ನು ತೀರ್ಮಾನಿಸಿದ ‘ಸಾಮಾನ್ಯ ಕನಿಷ್ಠ ಕಾರ್ಯಸೂಚಿ’ಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

1984ರಲ್ಲಿ, 32ನೆಯ ವಯಸ್ಸಿನಲ್ಲಿ ತಮ್ಮನ್ನು ಸಿಪಿಎಂ ಪಕ್ಷದ ಕೇಂದ್ರ ಸಮಿತಿಗೆ ವಿಶೇಷ ಆಹ್ವಾನಿತರನ್ನಾಗಿ ಆಯ್ಕೆ ಮಾಡಿದಾಗ, ‘ದೊಡ್ಡ ಜವಾಬ್ದಾರಿಯನ್ನು ಹೊರುವಷ್ಟು ನಾನು ಪ್ರಬುದ್ಧನೇ’ ಎಂಬ ಅನುಮಾನ ಯೆಚೂರಿ ಅವರನ್ನು ಕಾಡಿತ್ತು. ಆದರೆ ಆಗ ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಿದ್ದ ಇ.ಎಂ.ಎಸ್. ನಂಬೂದರಿಪಾಡ್ ಅವರಿಗೆ, ಸಿಬಿಎಸ್‌ಇ ಪರೀಕ್ಷೆಗಳಲ್ಲಿ ಮೊದಲ ರ್‍ಯಾಂಕ್ ಗಿಟ್ಟಿಸಿದ್ದ ಆಂಧ್ರಪ್ರದೇಶದ ಕಾಕಿನಾಡ ಮೂಲದ ಯೆಚೂರಿ ವಿಚಾರವಾಗಿ ಯಾವ ಅನುಮಾನವೂ ಇರಲಿಲ್ಲ. 

ವಿಶೇಷ ಆಹ್ವಾನಿತರಾಗಿ ಆಯ್ಕೆಯಾಗಿ ಎಂಟು ವರ್ಷಗಳ ನಂತರದಲ್ಲಿ ಪಕ್ಷದ ಪಾಲಿಟ್‌ ಬ್ಯೂರೊದ ಅತ್ಯಂತ ಕಿರಿಯ ಸದಸ್ಯರಾದರು. ದೇಶದ ನೀತಿ ನಿರೂಪಣೆಯ ವಿಚಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು.

1969ರ ತೆಲಂಗಾಣ ಹೋರಾಟವು ಯೆಚೂರಿ ಅವರನ್ನು ದೆಹಲಿಗೆ ವ್ಯಾಸಂಗಕ್ಕಾಗಿ ಬರುವಂತೆ ಮಾಡಿತು. ಆದರೆ ಆಗ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದ ಅವರು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಭೂಗತರಾಗಬೇಕಾಯಿತು. ಇದರ ಪರಿಣಾಮವಾಗಿ ಪಿಎಚ್‌.ಡಿ ಅಧ್ಯಯನವನ್ನು ಮಧ್ಯದಲ್ಲಿಯೇ ಕೈಬಿಡಬೇಕಾಯಿತು. ನಂತರದಲ್ಲಿ ಯೆಚೂರಿ ಅವರ ಬಂಧನ ಕೂಡ ಆಯಿತು. 1978ರಲ್ಲಿ ಯೆಚೂರಿ ನೇತೃತ್ವದಲ್ಲಿ ಪ್ರತಿಭಟನೆ ನಡೆದ ನಂತರದಲ್ಲಿ ಇಂದಿರಾ ಗಾಂಧಿ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕುಲಾಧಿಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಯುವಕ ಯೆಚೂರಿ ಅವರು ಇಂದಿರಾ ವಿರುದ್ಧದ ದೋಷಾರೋಪ ಪಟ್ಟಿಯನ್ನು ಅವರ ಎದುರೇ ಓದಿ ಹೇಳಿದ ಚಿತ್ರವು ಆ ದಿನಗಳ ನೆನಪಾಗಿ ಇಂದಿಗೂ ಉಳಿದಿದೆ.

ಯೆಚೂರಿ ಅವರದ್ದು ಐವತ್ತು ವರ್ಷಗಳ ರಾಜಕೀಯ ಜೀವನ. ಅದು ಶುರುವಾಗಿದ್ದು 1974ರಲ್ಲಿ ಜೆಎನ್‌ಯುನಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ವ್ಯಾಸಂಗ ಮಾಡುತ್ತಿದ್ದಾಗ ಎಸ್‌ಎಫ್‌ಐ ಸಂಘಟನೆಯನ್ನು ಸೇರುವ ಮೂಲಕ. ಯೆಚೂರಿ ಅವರು ಜೆಎನ್‌ಯುನಲ್ಲಿ ಮೂರು ಬಾರಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದರು. ಮಾರ್ಕ್ಸ್‌ವಾದ–ಲೆನಿನ್‌ವಾದದಲ್ಲಿ ಅವರು ಹೊಂದಿದ್ದ ಬದ್ಧತೆ ಅವರ ರಾಜಕೀಯ ಜೀವನದುದ್ದಕ್ಕೂ ಅಚಲವಾಗಿತ್ತು. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ರಾಜಕೀಯ ಜೀವನದ ಆರಂಭದಲ್ಲಿ ವಿರೋಧಿಸಿದ ಯೆಚೂರಿ, ಈಗ ಬಲಪಂಥೀಯ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ನಡೆಸುತ್ತಲೇ ತಮ್ಮ ಜೀವನ ಮುಗಿಸಿದ್ದಾರೆ.

ಕೆಲವು ಕಾಮ್ರೇಡ್‌ಗಳು ನಗುವುದಕ್ಕೂ ಕಷ್ಟಪಟ್ಟರೆ, ಯೆಚೂರಿ ಅವರು ಯಾವಾಗಲೂ ಹಸನ್ಮುಖಿಯಾಗಿ ಇರುತ್ತಿದ್ದರು. ಅಲ್ಲದೆ, ಕೆಲವೊಮ್ಮೆ ನಿಶ್ಚಿತವಾದ ಅಭಿಪ್ರಾಯಕ್ಕೆ ಅಂಟಿಕೊಳ್ಳುತ್ತಿರಲಿಲ್ಲ. ಇದನ್ನು, ಬಂಡವಾಳಶಾಹಿ ವರ್ಗದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸ್ವಭಾವ ಎಂದು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಿದೆ. ಕೆಲವರು ಯೆಚೂರಿ ಅವರನ್ನು ಅವಕಾಶವಾದಿ ಎಂದು ಕರೆದರು. ಇನ್ನು ಕೆಲವರು ಅವರು ವ್ಯಾವಹಾರಿಕ ದೃಷ್ಟಿಕೋನದವರು ಎಂದು ನಕಾರಾತ್ಮಕ ಧಾಟಿಯಲ್ಲಿ ಚಿತ್ರಿಸಿದರು. ಹೀಗಿದ್ದರೂ, ತಮ್ಮ ಸಿದ್ಧಾಂತ ಮಾರ್ಕ್ಸ್‌ವಾದವೇ ವಿನಾ ‘ಅವಕಾಶವಾದ’ ಅಥವಾ ‘ವ್ಯಾವಹಾರಿಕವಾದ’ ಅಲ್ಲ ಎಂದು ಯೆಚೂರಿ ನಂಬಿದ್ದರು. 

ಯೆಚೂರಿ ಅವರು 2000ನೇ ಇಸವಿಯ ನಂತರದಲ್ಲಿ ನೇಪಾಳದ ಮಾವೋವಾದಿ ನಾಯಕರನ್ನು ರಾಜಕೀಯ ಮುಖ್ಯವಾಹಿನಿಗೆ ಕರೆತರುವಲ್ಲಿ ವಹಿಸಿದ ಪಾತ್ರವನ್ನು ಮರೆಯದೆ ಇದ್ದಿದ್ದರೆ, ಭಾರತದ ಪರಿಸ್ಥಿತಿಯನ್ನು ಅವರು ವಿಶ್ಲೇಷಿಸುತ್ತಿದ್ದ ಬಗೆಯಲ್ಲಿ ತಪ್ಪುಹುಡುಕುವ ಕೆಲಸವನ್ನು ಯೆಚೂರಿ ಅವರ ವಿರೋಧಿಗಳು ಮಾಡುತ್ತಿರಲಿಲ್ಲ. ನೇಪಾಳದ ಮಾವೋವಾದಿ ನಾಯಕರನ್ನು ಮುಖ್ಯವಾಹಿನಿಗೆ ಕರೆತಂದ ಪರಿಣಾಮವಾಗಿ ಆ ದೇಶವು ಧರ್ಮನಿರಪೇಕ್ಷ ರಾಷ್ಟ್ರವಾಗಿ ಪರಿವರ್ತನೆ ಕಂಡಿತು.

ಭಾರತದ ಪರಿಸ್ಥಿತಿಯು ಸರ್ವಾಧಿಕಾರದ್ದು, ಇಲ್ಲಿನ ಹೋರಾಟದಲ್ಲಿ ಕಾಂಗ್ರೆಸ್ಸನ್ನು ಹೊರಗಿರಿಸಬೇಕು ಎಂದು ಪ್ರಕಾಶ್ ಕಾರಟ್ ಮತ್ತು ಅವರ ಬೆಂಬಲಿಗರು ಭಾವಿಸಿದ್ದರು. ಆದರೆ ಯೆಚೂರಿ ಅವರು, ಮೋದಿ ನೇತೃತ್ವದ ಆಡಳಿತವು ‘ಫ್ಯಾಸಿಸ್ಟ್’ ಪ್ರವೃತ್ತಿಯನ್ನು ತೋರಿಸುತ್ತಿದೆ, ಅದನ್ನು ಸೋಲಿಸಲು ಧರ್ಮನಿರಪೇಕ್ಷ ಹಾಗೂ ಪ್ರಜಾತಂತ್ರವಾದಿ ಶಕ್ತಿಗಳೆಲ್ಲ ಒಂದಾಗಬೇಕು ಎಂದು ಪ್ರತಿಪಾದಿಸುತ್ತಿದ್ದರು.

ಪಕ್ಷದ ಕೇಂದ್ರ ನಾಯಕರಲ್ಲಿ ಹೆಚ್ಚಿನವರಿಗೆ ಯೆಚೂರಿ ಅವರ ಆಲೋಚನಾಕ್ರಮದಲ್ಲಿ ಸತ್ಯ ಕಾಣಲಿಲ್ಲ. ಯೆಚೂರಿ ಅವರು ತಮ್ಮ ವಾದವನ್ನು ಪಕ್ಷದ ಸಮಾವೇಶದಲ್ಲಿ ಮಂಡಿಸಿದರು. ಅಲ್ಲಿ ತಳಮಟ್ಟದಿಂದ ಬಂದಿದ್ದ ಪ್ರತಿನಿಧಿಗಳು ಅವರಿಗೆ ಜೊತೆಯಾಗಿ ನಿಂತರು. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸಿನ ಜೊತೆ ಹೊಂದಾಣಿಕೆಯನ್ನು ಅವರು ಸಾಧ್ಯವಾಗಿಸಿದರು. ಆದರೆ ಅದರಲ್ಲಿ ಯಶಸ್ಸು ಸಿಗಲಿಲ್ಲ.

ಪ್ರತಿನಿಧಿಗಳ ಒತ್ತಡದ ಪರಿಣಾಮವಾಗಿ ಯೆಚೂರಿ ಅವರು 2015ರಲ್ಲಿ, 2018ರಲ್ಲಿ ಹಾಗೂ 2022ರಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿಯಾದರು. ಅವರ ಬೆಂಬಲದೊಂದಿಗೆ ಅವರು, ಬಿಜೆಪಿಯನ್ನು ಸೋಲಿಸಲು ಪಕ್ಷವು ಕಾಂಗ್ರೆಸ್ ಸೇರಿದಂತೆ ಇತರ ಧರ್ಮನಿರಪೇಕ್ಷ ಪಕ್ಷಗಳ ಜೊತೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುವಂತೆ ಮಾಡಿದರು.

ಯೆಚೂರಿ ಅವರು ಮುಖ್ಯ ಹುದ್ದೆಗೆ ಬಂದರೂ ಸಿಪಿಎಂ ಪಕ್ಷದ ಅವನತಿಯನ್ನು ತಡೆಯಲು ಆಗಲಿಲ್ಲ. ಆದರೆ ಅವರ ಎತ್ತರದ ವ್ಯಕ್ತಿತ್ವದ ಕಾರಣದಿಂದಾಗಿ ಭಾರತದ ಎಡಪಕ್ಷಗಳು, ದೇಶದ ಧರ್ಮನಿರಪೇಕ್ಷ ರಾಜಕಾರಣವನ್ನು ರೂಪಿಸುವಲ್ಲಿ ಧ್ವನಿ ಉಳಿಸಿಕೊಳ್ಳುವುದು ಸಾಧ್ಯವಾಯಿತು. ಪಕ್ಷಕ್ಕೆ ಹೊಸ ಜೀವ ಕೊಡುವುದಕ್ಕೆ ಯೆಚೂರಿ ಅವರಿಗೆ ಸಾಧ್ಯವಾಗಲಿಲ್ಲ.

ಆರ್‌ಎಸ್‌ಎಸ್‌–ಬಿಜೆಪಿ ವಿರುದ್ಧದ ಹೋರಾಟಕ್ಕೆ ಜೊತೆಗಾರರನ್ನು ಅರಸುತ್ತಿದ್ದಾಗ, ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ವಿಚಾರವಾಗಿ ಯುವಕರಲ್ಲಿ, ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ಹಾಗೂ ದಲಿತರಲ್ಲಿ, ಅಸಮಾಧಾನ ಇರುವುದು ಯೆಚೂರಿ ಅವರಿಗೆ ಕಂಡಿತು. ದಲಿತರು ಹಾಗೂ ಕಮ್ಯುನಿಸ್ಟರನ್ನು ಒಗ್ಗೂಡಿಸಲು ಅವರು ‘ನೀಲ್ ಸಲಾಂ, ಲಾಲ್ ಸಲಾಂ’ ಘೋಷವಾಕ್ಯದ ಪರ ನಿಂತರು. ಅದೇ ಸಂದರ್ಭದಲ್ಲಿ ಅಸ್ಮಿತೆಯ ರಾಜಕಾರಣದ ಅಪಾಯಗಳನ್ನು ತಡೆದರು. ಮೋದಿ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು, ‘ಅವಾರ್ಡ್‌ ವಾಪ್ಸಿ’ ಅಭಿಯಾನಕ್ಕೆ ಬುದ್ಧಿಜೀವಿಗಳು ಒಗ್ಗೂಡುವುದಕ್ಕೆ ಭೂಮಿಕೆ ಸಿದ್ಧಪಡಿಸಿದವರಲ್ಲಿ ಇವರೂ ಒಬ್ಬರು.

2019ರ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ವಿರೋಧ ಪಕ್ಷದ ಮೈತ್ರಿಕೂಟವನ್ನು ಕಟ್ಟಲು ಯತ್ನಿಸಿದರು. ಅದರಲ್ಲಿ ಒಂದುಮಟ್ಟಿಗೆ ಯಶಸ್ಸು ಕಂಡರು. ಆದರೆ ಪುಲ್ವಾಮಾ ದಾಳಿ ಹಾಗೂ ಬಾಲಾಕೋಟ್‌ ನಿರ್ದಿಷ್ಟ ದಾಳಿಯು ಚುನಾವಣೆಯ ಗತಿಯನ್ನು ಬದಲಿಸಿದವು. 

ಯೆಚೂರಿ ಅವರು ಬಿಜೆಪಿಗೆ ರಾಜ್ಯಸಭೆಯಲ್ಲಿ ನೆಮ್ಮದಿಯಿಂದ ಉಸಿರಾಡಲು ಒಮ್ಮೆಯೂ ಅವಕಾಶ ಕೊಡುತ್ತಿರಲಿಲ್ಲ! ತಮ್ಮದೇ ಪಕ್ಷದ ನಾಯಕರು ಸರ್ಕಾರದ ವಿಚಾರವಾಗಿ ಮೃದುವಾಗಿದ್ದಂತೆ ಕಂಡಾಗಲೂ, ಎಡಪ‍ಕ್ಷಗಳನ್ನು ಹೊರತುಪಡಿಸಿದ ಇತರ ವಿರೋಧ ಪಕ್ಷಗಳ ಸಂಸದರು ಯೆಚೂರಿ ಬೆನ್ನಿಗೆ ನಿಲ್ಲುತ್ತಿದ್ದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಕೂಡ ಅವರು ಮೃದುವಾಗಿ ವರ್ತಿಸುತ್ತಿರಲಿಲ್ಲ. ಭಾರತ–ಅಮೆರಿಕ ಅಣು ಒಪ್ಪಂದದ ಸಂದರ್ಭದಲ್ಲಿ ಕಾರಟ್ ಜೊತೆ ಎಡಪಕ್ಷಗಳ ಪರವಾಗಿ ಮಾತುಕತೆ ನಡೆಸಿದವರಲ್ಲಿ ಯೆಚೂರಿ ಕೂಡ ಪ್ರಮುಖರು. 2ಜಿ ತರಂಗಾಂತರ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಪತ್ರಿಕಾಗೋಷ್ಠಿ ನಡೆಸಿದ ಮೊದಲಿಗರಲ್ಲಿ ಯೆಚೂರಿ ಅವರೂ ಒಬ್ಬರು.

ಇಂಗ್ಲಿಷ್, ಹಿಂದಿ, ತೆಲುಗು, ಬಂಗಾಳಿ ಮತ್ತು ತಮಿಳು ಭಾಷೆಗಳ ಮೇಲೆ ಹಿಡಿತ ಹೊಂದಿದ್ದ ಯೆಚೂರಿ ಅವರು ಭಾರತವು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ‍ಪ್ರಜಾತಂತ್ರ ಗಣರಾಜ್ಯವಾಗಿ ಇರಬೇಕು ಎಂಬ ವಿಚಾರದಲ್ಲಿ ಬದ್ಧತೆ ಹೊಂದಿದ್ದರು. 2014ರ ಲೋಕಸಭಾ ಚುನಾವಣೆಯ ನಂತರ, ‘ಸಂವಿಧಾನ ಅಪಾಯದಲ್ಲಿದೆ’ ಎಂಬ ಅಭಿಯಾನವನ್ನು ಶುರುಮಾಡಿದ್ದು ಯೆಚೂರಿ. ಈ ಮಾತಿನಲ್ಲಿ ಸತ್ಯವಿದೆ ಎಂದು ಮತದಾರರು ಹತ್ತು ವರ್ಷಗಳ ನಂತರ ಗುರುತಿಸಿದರು. ಅವರ ಪಕ್ಷಕ್ಕೆ ಇದರಿಂದ ಹೆಚ್ಚು ಲಾಭವಾಗಲಿಲ್ಲ; ಆದರೆ ಧರ್ಮನಿರಪೇಕ್ಷ ಪಕ್ಷಗಳಿಗೆ ಇದರಿಂದ ಪ್ರಯೋಜನ ಆಯಿತು.

ಸೀತಾರಾಂ ಯೆಚೂರಿ ನಡೆದು ಬಂದ ಹಾದಿ...

* 1952ರ ಆಗಸ್ಟ್‌ 12: ಮದ್ರಾಸ್‌ (ಈಗಿನ ಚೆನ್ನೈ) ತೆಲುಗು ಕುಟುಂಬದಲ್ಲಿ ಜನನ. ಹೈದರಾಬಾದ್‌ನಲ್ಲಿ ವಿದ್ಯಾಭ್ಯಾಸ 

* 1969: ಆಂಧ್ರಪ್ರದೇಶದಲ್ಲಿ ತೆಲಂಗಾಣ ಹೋರಾಟ ಆರಂಭವಾದ ಬಳಿಕ ಉನ್ನತ ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ

* 1970: ಸಿಬಿಎಸ್‌ಇ 10ನೇ ತರಗತಿಯಲ್ಲಿ ಮೊದಲ ರ‍್ಯಾಂಕ್‌ನ ಸಾಧನೆ

* 1974: ಜೆಎನ್‌ಯುನಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ಸ್ಟೂಡೆಂಟ್ಸ್‌ ಫೆಡರೇಷನ್‌ ಆಫ್‌ ಇಂಡಿಯಾಕ್ಕೆ (ಎಸ್‌ಎಫ್‌ಐ) ಸೇರ್ಪಡೆ

* 1975: ಸಿಪಿಎಂ ಸದಸ್ಯರಾಗಿ ಪಕ್ಷ ರಾಜಕಾರಣಕ್ಕೆ ಪ್ರವೇಶ

* 1978: ಎಸ್‌ಎಫ್‌ಐನ ಅಖಿಲ ಭಾರತ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆ, ನಂತರ ಅಧ್ಯಕ್ಷರಾಗಿ ನೇಮಕ

* 1984: ಸಿಪಿಎಂನ ಕೇಂದ್ರ ಸಮಿತಿಯ ಸದಸ್ಯರಾಗಿ ನೇಮಕ

*1992: ಸಿಪಿಎಂನ ಪಾಲಿಟ್‌ಬ್ಯೂರೊ ಸದಸ್ಯರಾಗಿ ಆಯ್ಕೆ

* 2005: ಪಶ್ಚಿಮ ಬಂಗಾಳದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆ

* 2015 ಏಪ್ರಿಲ್‌ 19: ಸಿಪಿಎಂನ ಐದನೇ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

* 2011: ಎರಡನೇ ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆ

* 2017: ರಾಜ್ಯಸಭಾ ಸದಸ್ಯತ್ವದ ಅವಧಿ ಕೊನೆ 

* 2021: ಕೋವಿಡ್‌ನಿಂದಾಗಿ 35 ವರ್ಷದ ಮಗನ ಸಾವು

* 2023: ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟದ ರಚನೆಯಲ್ಲಿ ಮಹತ್ವದ ಪಾತ್ರ 

* 2024 ಆ.19: ಉಸಿರಾಟದ ಸಮಸ್ಯೆ, ನಿಮೋನಿಯಾ ಕಾರಣಕ್ಕೆ ದೆಹಲಿಯ ಏಮ್ಸ್‌ಗೆ ದಾಖಲು

* 2024 ಸೆ.12: ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರು. 50 ವರ್ಷಗಳ ರಾಜಕೀಯ ಜೀವನಕ್ಕೆ ತೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.