ಅಮರಾವತಿ (ಮಹಾರಾಷ್ಟ್ರ): ಅಮರಾವತಿ ಸಂಸದೆ ನವನೀತ್ ರಾಣಾ ಅವರಿಗೆ ವಾಟ್ಸ್‌ಆ್ಯಪ್ ಮೂಲಕ ಕೊಲೆ ಬೆದರಿಕೆ ಹಾಕಿದ್ದ ಆರೋಪದಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಆಡಿಯೊ ಸಂದೇಶದಲ್ಲಿ ನವನೀತ್ ರಾಣಾ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನವನೀತ್ ರಾಣಾ ಅವರ ಮೊಬೈಲ್‌ಗೆ ಮಾರ್ಚ್ 3ರಂದು ಕೊಲೆ ಬೆದರಿಕೆ ಸಂದೇಶ ರವಾನೆಯಾಗಿದೆ. ಆಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧವೂ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ರಾಣಾ ನೀಡಿದ ದೂರಿನ ಆಧಾರದ ಮೇಲೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಸಲಾಗುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
2019ರ ಅಮರಾವತಿ ಲೋಕಸಭಾ ಚುನಾವಣೆಯಲ್ಲಿ ಶಿವಸೇನಾ ನಾಯಕ ಆನಂದರಾವ್ ಅಡ್ಸುಲ್ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನವನೀತ್ ರಾಣಾ ಗೆಲುವು ಸಾಧಿಸಿದ್ದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಮರಾವತಿ (ಎಸ್‌ಸಿ) ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲು ನವನೀತ್ ಒಲವು ಹೊಂದಿದ್ದಾರೆಂದು ವರದಿಯಾಗಿದೆ.
ನವನೀತ್ ರಾಣಾ ಅವರು ಕನ್ನಡ ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.