ಅಮೇಥಿ: ಪ್ರಧಾನಮಂತ್ರಿ ನರೇಂದ್ರಮೋದಿ ವಿರುದ್ಧ ಕೆಟ್ಟ ಭಾಷೆ ಬಳಕೆ ಮತ್ತು ಸುಳ್ಳು ಹೇಳಿಕೆ ನೀಡುವ ಮೂಲಕ ದೇಶದಲ್ಲಿ ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
ಇದೇ ರೀತಿಯಲ್ಲಿ ಹೋದರೆ ಕಾಂಗ್ರೆಸ್, 2024ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ ಬರೇಲಿ ಕ್ಷೇತ್ರವನ್ನು ಕಳೆದುಕೊಳ್ಳಲಿದೆ ಎಂದು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್ ಗಾಂಧಿಯಿಂದ ಅಮೇಥಿ ಲೋಕಸಭಾ ಕ್ಷೇತ್ರವನ್ನು ಕಸಿದುಕೊಂಡ ಸ್ಮೃತಿ ಇರಾನಿ ಹೇಳಿದ್ದಾರೆ.
“ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕೆಟ್ಟ ಭಾಷೆ ಬಳಸಿರುವ ರಾಹುಲ್ ಗಾಂಧಿ, ಸುಳ್ಳು ಹೇಳಿಕೆ ಕೊಡುವ ಮೂಲಕ ದೇಶದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ,” ಎಂದು ತಮ್ಮ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ಆರೋಪಿಸಿದ್ದಾರೆ.
ಶುಕ್ರವಾರದಿಂದ ಅಮೇಥಿಯಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಸ್ಮೃತಿ ಇರಾನಿ, ಇವತ್ತು ಕ್ಷೇತ್ರದಲ್ಲಿ ವಿವಿಧ ಯೋಜನೆಯಡಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೇಳಿಕೆ ನೀಡಿದರು. ತಮ್ಮ ರಾಜಕಾರಣವನ್ನು ನಿರಾತಂಕವಾಗಿ ನಡೆಸಲೆಂದೇ ಗಾಂಧಿ ಕುಟುಂಬ ಮತ್ತು ರಾಹುಲ್ ಗಾಂಧಿ, ರೈತರು, ಬಡವರನ್ನು ಬಡತನಕ್ಕೆ ದೂಡಿದ್ದಾರೆ ಎಂದು ಆರೋಪಿಸಿದರು.
ಅಮೇಥಿ ಕ್ಷೇತ್ರವು ಈಗಾಗಲೆ ರಾಹುಲ್ ಗಾಂಧಿಗೆ ಗುಡ್ ಬೈ ಹೇಳಿದೆ. ಇದೇ ರೀತಿ ರಾಯ್ ಬರೇಲಿ ಸಹ 2024ರ ಚುನಾವಣೆಯಲ್ಲಿ ಗಾಂಧಿ ಕುಟುಂಬಕ್ಕೆ ಗುಡ್ ಬೈ ಹೇಳಲಿದೆ. ಒಂದು ಸಾಮಾನ್ಯ ಕುಟುಂಬದಿಂದ ಬಂದ ನಾನು ಗಾಂಧಿ ಕುಟುಂಬದ ವಿರುದ್ಧಹೋರಾಡುವುದು ಸುಲಭವಾಗಿರಲಿಲ್ಲ ಎಂದಿದ್ದಾರೆ.
“ನಾನು ತುಂಬಾ ಅಪಮಾನ ಅನುಭವಿಸಿದ್ದೇನೆ. ಆದರೆ ನಿಮ್ಮ ಸಂಸದೆಯಾಗಿ ನಾನು ಇಲ್ಲಿ ನಿಂತಿರುವುದು ಇಲ್ಲಿನ ಜನರ ಪ್ರೀತಿಗೆ ಸಾಕ್ಷಿಯಾಗಿದೆ, ಬಡತನವನ್ನೇ ನೋಡದ ಕೆಲವರು ಹೇಗೆ ಬಡವರ ನೋವನ್ನು ಅರಿಬಲ್ಲರು?” ಎಂದು ಟೀಕಿಸಿದ್ದಾರೆ. ರೈತರ ಭೂಮಿ ಕಸಿಯಲಾಗುತ್ತಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, "ಚಿನ್ನದ ಅರಮನೆಗಳಲ್ಲಿ ವಾಸಿಸುವವರು ರೈತರ ದುಃಸ್ಥಿತಿಯನ್ನು ಹೇಗೆ ತಿಳಿಯಬಲ್ಲರು?" ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.