ದಿಯೋಘರ್ (ಜಾರ್ಖಂಡ್): ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ, ಬ್ರಿಟಿಷರು ಮಾಡಿದಂತೆ ದೇಶದ ನೀರು, ಅರಣ್ಯ ಮತ್ತು ಭೂಮಿಯನ್ನು ಲೂಟಿ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಶುಕ್ರವಾರ ಜಾರ್ಖಂಡ್‌ನ ದಿಯೋಘಡದಲ್ಲಿ, ಗೊಡ್ಡಾ ಲೋಕಸಭಾ ಕ್ಷೇತ್ರದ ತಮ್ಮ ಅಭ್ಯರ್ಥಿ ಪ್ರದೀಪ್ ಯಾದವ್ ಪರ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ‘ಪ್ರಧಾನಿ ಮೋದಿ ದೇಶದ ಸಂಪತ್ತನ್ನು ಅವರ ಕೋಟ್ಯಧಿಪತಿ ಸ್ನೇಹಿತರಿಗೆ ಹಸ್ತಾಂತರಿಸಿದರು. ನಾವು ಬ್ರಿಟಿಷರನ್ನು ಎದುರಿಸಿದವರು, ಬಿಜೆಪಿ ಬಗ್ಗೆ ನಮಗೆ ಭಯವಿಲ್ಲ’ ಎಂದು ಹೇಳಿದರು.
ಕಾಂಗ್ರೆಸ್ ಯಾವಾಗಲೂ ಹಿಂದೂ ಮತ್ತು ಮುಸ್ಲಿಮರನ್ನು ಒಗ್ಗೂಡಿಸುತ್ತದೆ. ಆದರೆ ಬಿಜೆಪಿ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸುತ್ತಿದೆ ಎಂದು ದೂರಿದರು.
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಉಲ್ಲೇಖಿಸಿದ ಖರ್ಗೆ, ಚುನಾವಣೆಗೂ ಮುನ್ನ ಮೋದಿ ಬುಡಕಟ್ಟು ಸಮುದಾಯದ ಮುಖ್ಯಮಂತ್ರಿಯನ್ನು ಜೈಲಿಗೆ ಕಳುಹಿಸಿದ್ದಾರೆ. ಜಾರ್ಖಂಡ್ ಜನರು ಈ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಬೇಕು. ಕೇಂದ್ರದ ಬಿಜೆಪಿ ಸರ್ಕಾರವನ್ನು ತೆಗೆದುಹಾಕುವ ಮೂಲಕ ಸಂವಿಧಾನವನ್ನು ಉಳಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆದಿವಾಸಿಗಳಿಗೆ ಪ್ರತ್ಯೇಕ ಸರ್ನಾ ಧಾರ್ಮಿಕ ಸಂಹಿತೆ ಜಾರಿ ಮಾಡಲಿದೆ. ಜತೆಗೆ ಜನರಿಗೆ ನ್ಯಾಯ ಕೊಡಿಸಲು ಜಾತಿ ಗಣತಿ ನಡೆಸಲಿದೆ ಎಂದು ಖರ್ಗೆ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.