ADVERTISEMENT

ಸರಯೂ ನದಿ ತೀರದಲ್ಲಿ ‘ರಾಮಾಯಣ ಆಧ್ಯಾತ್ಮಿಕ ವನ’

ರಾಮನ 14 ವರ್ಷದ ವನವಾಸದ ಜೀವನ ವರ್ಣನೆ

ಪಿಟಿಐ
Published 11 ಜನವರಿ 2024, 14:27 IST
Last Updated 11 ಜನವರಿ 2024, 14:27 IST
<div class="paragraphs"><p>ಅಯೋಧ್ಯೆಯ ರಾಮಮಂದಿರಲ್ಲಿನ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ 108 ಅಡಿ ಉದ್ದದ ಧೂಪದ ಕಡ್ಡಿಯನ್ನು ಟ್ರಕ್‌ನಲ್ಲಿ ಟ್ರಕ್‌ನಲ್ಲಿ ಸಾಗಿಸಲಾಗುತ್ತಿದೆ. ಇದನ್ನು ಜನರು ಕುತೂಹಲದಿಂದ ವೀಕ್ಷಿಸಿದರು –ಪಿಟಿಐ ಚಿತ್ರ </p></div>

ಅಯೋಧ್ಯೆಯ ರಾಮಮಂದಿರಲ್ಲಿನ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ 108 ಅಡಿ ಉದ್ದದ ಧೂಪದ ಕಡ್ಡಿಯನ್ನು ಟ್ರಕ್‌ನಲ್ಲಿ ಟ್ರಕ್‌ನಲ್ಲಿ ಸಾಗಿಸಲಾಗುತ್ತಿದೆ. ಇದನ್ನು ಜನರು ಕುತೂಹಲದಿಂದ ವೀಕ್ಷಿಸಿದರು –ಪಿಟಿಐ ಚಿತ್ರ

   

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಲಿರುವ ಭಕ್ತರು ಮುಂದಿನ ದಿನಗಳಲ್ಲಿ, ರಾಮನ  14 ವರ್ಷದ ವನವಾಸ ಕುರಿತು ವಿವರಿಸುವ ‘ಆಧ್ಯಾತ್ಮ ವನ’ವನ್ನು ಕಣ್ತುಂಬಿಕೊಳ್ಳಬಹುದು. 

ಹೌದು, ಅಯೋಧ್ಯೆ ಯೋಜನೆಯ ಭಾಗವಾಗಿ ಸರಯೂ ನದಿಯ ದಂಡೆಯಲ್ಲಿ ರಾಮನ ವ್ಯಕ್ತಿತ್ವ ಸಾರುವ ತೆರೆದ ವಸ್ತುಸಂಗ್ರಹಾಲಯ ಒಳಗೊಳ್ಳುವ ಉದ್ಯಾನವನ್ನು ನಿರ್ಮಿಸಲು ನಿರ್ಧರಿಸಲಾಗಿದೆ. 

ADVERTISEMENT

ಅಯೋಧ್ಯೆ ಮರು ಅಭಿವೃದ್ಧಿ ಪ್ರಾಜೆಕ್ಟ್‌ನ ಮಾಸ್ಟರ್‌ ಪ್ಲಾನರ್ ದೀಕ್ಷು ಕುಕರೇಜಾ ಅವರು, ‘ರಾಮ, ರಾಮಾಯಣ, ಅಯೋಧ್ಯೆ ಮತ್ತು ಸರಯೂ ನದಿಯು ಹಿಂದೂ ಧರ್ಮದ ಬಹುಮುಖ್ಯ ಭಾಗವಾಗಿವೆ. ಇದರ ಭಾಗವಾಗಿಯೇ ಶ್ರೀರಾಮ ವನವಾಸಕ್ಕೆ ಹೋದ 14 ವರ್ಷಗಳನ್ನು ಚಿತ್ರಿಸುವ ಅಂಶಗಳನ್ನು ಒಳಗೊಂಡ ಪರಿಸರ ಸ್ನೇಹಿ ಉದ್ಯಾನವನ್ನು ಸರಯೂ ನದಿಯ ದಂಡೆ ಮೇಲೆ ನಿರ್ಮಿಸಲಾಗುತ್ತದೆ’ ಎಂದಿದ್ದಾರೆ. 

ಛತ್ತೀಸಗಢ: ಉಚಿತ ರೈಲು ಯೋಜನೆಗೆ ಅನುಮೋದನೆ

ರಾಯಪುರ: ರಾಮಮಂದಿರ ದರ್ಶನಕ್ಕಾಗಿ ಅಯೋಧ್ಯೆಗೆ ಹೋಗಬಯಸುವ ಜನರಿಗೆ ವಾರ್ಷಿಕ ಉಚಿತ ರೈಲು ಯಾತ್ರೆ ಯೋಜನೆಗೆ ಬಿಜೆಪಿ ನೇತೃತ್ವದ ಛತ್ತೀಸಗಢ ಸರ್ಕಾರ ಅನುಮೋದನೆ ನೀಡಿದೆ. 

ಮುಖ್ಯಮಂತ್ರಿ ವಿಷ್ಣು ದೇವ್ ಸಾಯ್ ಅವರ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾರ್ಷಿಕ 20 ಸಾವಿರ ಜನರು ಈ ರೈಲಿನಲ್ಲಿ ಅಯೋಧ್ಯೆಗೆ ಭೇಟಿ ನೀಡುವ ನಿರೀಕ್ಷೆ ಇದೆ.

ಪ್ರತಿಷ್ಠಾಪನೆ ಸಂಭ್ರಮ..ಹಲವು ಕಾರ್ಯಕ್ರಮ

*ರಾಮಮಂದಿರ ಉದ್ಘಾಟನೆಯಾಗಲಿರುವ ಇದೇ 22ರಂದು 84 ಗಂಗಾ ಸ್ನಾನ ಘಟ್ಟಗಳಿಗೆ ಭಕ್ತರು ಮತ್ತು ಪ್ರವಾಸಿಗರಿಗೆ ಉಚಿತ ಸೇವೆ ನೀಡಲು ನಿರ್ಧರಿಸಿರುವುದಾಗಿ ವಾರಾಣಸಿಯ ಅಂಬಿಗರು ತಿಳಿಸಿದ್ದಾರೆ. 

* 22ರಂದು ರಾಜಸ್ಥಾನದ ಜೈಪುರವು ದೀಪಾವಳಿಯಂತೆ ಬೆಳಗಲಿದೆ. ಕನಿಷ್ಠ 5 ಲಕ್ಷ ದೀಪದ ಹಣತೆಗಳನ್ನು ಹಚ್ಚಿ ಬೆಳಗಲಾಗುವುದು ಎಂದು ಮೇಯರ್ ಡಾ. ಸೌಮ್ಯಾ ಗುಜ್ಜರ್ ತಿಳಿಸಿದ್ದಾರೆ. 

* ರಾಷ್ಟ್ರರಾಜಧಾನಿ ದೆಹಲಿಯ ವಿವಿಧ ವಸತಿ ಕ್ಷೇಮಾಭಿವೃದ್ಧಿ ಸಂಘಟನೆಗಳು ಹಣತೆ ಬೆಳಗುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿವೆ. 

* 4.31 ಕೋಟಿ ಬಾರಿ ‘ರಾಮ’ ನಾಮ ಬರೆದ ಕಾಗದಗಳನ್ನು ಮಧ್ಯಪ್ರದೇಶದ ಛಂದ್ವಾರದಿಂದ ಅಯೋಧ್ಯೆಗೆ ಎರಡು ಬಸ್‌ಗಳಲ್ಲಿ ಕಳುಹಿಸಿಕೊಡಲಾಗುತ್ತದೆ ಎಂದು ಕಾಂಗ್ರೆಸ್ ಸಂಸದ ನಕುಲ್ ನಾಥ್ ಗುರುವಾರ ತಿಳಿಸಿದ್ದಾರೆ. ಬುಧವಾರ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಮತ್ತು ಅವರ ಪುತ್ರ ನಕುಲ್‌ನಾಥ್ ಅವರು 108 ಸಲ ರಾಮ ನಾಮವನ್ನು ಬರೆದಿದ್ದರು. 

* ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗುವ ದಿನದಂದು ಅಯೋಧ್ಯೆ ವಿಮಾನ ನಿಲ್ದಾಣಕ್ಕೆ 100 ಚಾರ್ಟರ್ಡ್ ವಿಮಾನಗಳು ಬರಲಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

* 22ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನಕ್ಕೆ ಅಯೋಧ್ಯೆಯಿಂದ ಚಾಲನೆ ನೀಡಲಿದ್ದಾರೆ.  

ಕಾಂಗ್ರೆಸ್ ವಿರುದ್ಧ ಹಿಮಂತಾ ಶರ್ಮಾ ಕಿಡಿ

ಕಾಂಗ್ರೆಸ್ ಪಕ್ಷಕ್ಕೆ ತನ್ನ ಪಾಪ ಕಡಿಮೆ ಮಾಡಿಕೊಳ್ಳುವ ಉತ್ತಮ ಅವಕಾಶವನ್ನು ನೀಡಲಾಗಿತ್ತು. ಆದರೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ನೀಡಲಾಗಿದ್ದ ಆಹ್ವಾನವನ್ನು ನಿರಾಕರಿಸಿದೆ. ಇದರಿಂದಾಗಿ ಕಾಂಗ್ರೆಸ್ ಅನ್ನು ‘ಹಿಂದೂ ವಿರೋಧಿ’ ಎಂದೇ ಇತಿಹಾಸ ಪರಿಗಣಿಸುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ.  ಆದರೆ ಸೋಮನಾಥ ಮಂದಿರ ವಿಚಾರದಲ್ಲಿ ಪಂಡಿತ್ ನೆಹರೂ ಅವರು ಅನುಸರಿಸಿದ್ದ ನೀತಿಯನ್ನೇ ಕಾಂಗ್ರೆಸ್ ನಾಯಕತ್ವ ಇದೀಗ ರಾಮಮಂದಿರ ವಿಚಾರದಲ್ಲೂ ಮುಂದುವರಿಸಿದೆ. ಹೀಗಾಗಿ ಇತಿಹಾಸವು ಕಾಂಗ್ರೆಸ್ ಅನ್ನು ಹಿಂದೂ ವಿರೋಧಿ ಪಕ್ಷ ಎಂದೇ ಭಾವಿಸಲಿದೆ ಎಂದರು.   ರಾಮಮಂದಿರ ನಿರ್ಮಾಣ ಆರಂಭವಾದ ದಿನದಿಂದಲೂ ಇದಕ್ಕೆ ವಿರೋಧವಿದ್ದ ಕಾಂಗ್ರೆಸ್‌ಗೆ ಆಮಂತ್ರಣ ಪಡೆಯುವ ಅರ್ಹತೆಯೇ ಇರಲಿಲ್ಲ. ಆದಾಗ್ಯೂ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗಿಯಾಗಬೇಕು ಎಂದು ಕಾಂಗ್ರೆಸ್ ನಾಯಕತ್ವಕ್ಕೆ ವಿಎಚ್‌ಪಿ ಆಹ್ವಾನ ನೀಡಿತ್ತು. ಈ ಮೂಲಕ ತನ್ನ ಪಾಪವನ್ನು ಕಡಿಮೆ ಮಾಡಿಕೊಳ್ಳುವ ಸುವರ್ಣಾವಕಾಶವನ್ನು ನೀಡಲಾಗಿತ್ತು. ಈ ಆಹ್ವಾನವನ್ನು ಸ್ವೀಕರಿಸುವ ಮೂಲಕ ಹಿಂದೂ ಸಮಾಜಕ್ಕೆ ಸಾಂಕೇಂತಿಕವಾಗಿ ಕ್ಷಮೆ ಕೇಳಬಹುದಿತ್ತು ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.