ADVERTISEMENT

ಬಿಜೆಪಿ ಮುಖಂಡ ಆಯೋಜಿಸಿದ್ದ ಕಾರ್ಯಕ್ರಮ; ಮಕ್ಕಳ ಕೈಗೂ ಇಟ್ಟರು ಮದ್ಯವಿದ್ದ ಪೊಟ್ಟಣ!

ಏಜೆನ್ಸೀಸ್
Published 8 ಜನವರಿ 2019, 11:41 IST
Last Updated 8 ಜನವರಿ 2019, 11:41 IST
   

ಹರ್ದೊಯಿ: ಉತ್ತರ ಪ್ರದೇಶದ ಬಿಜೆಪಿ ಮುಖಂಡರೊಬ್ಬರಪುತ್ರಇಲ್ಲಿನ ಶ್ರವಣ ದೇವಿ ದೇವಾಲಯದ ಸಮೀಪ ಆಯೋಜಿಸಿದ್ದಕಾರ್ಯಕ್ರಮದಲ್ಲಿ ಜನರಿಗೆ ಊಟದ ಪೊಟ್ಟಣದೊಂದಿಗೆ ಮದ್ಯದ ಬಾಟಲಿಯನ್ನೂ ಹಂಚಲಾಗಿದೆ. ಇದರ ಫೋಟೊಗಳು ಹಾಗೂ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪೂರಿ ಮತ್ತು ಸಬ್ಜಿಯಿದ್ದ ಪೊಟ್ಟಣದಲ್ಲಿ ಮದ್ಯವನ್ನೂ ಕಂಡ ಜನರು ತಮ್ಮ ಕಣ್ಣುಗಳನ್ನು ತಾವೇ ನಂಬಲು ಸಿದ್ಧರಿರಲಿಲ್ಲ. ಬಿಜೆಪಿ ಮುಖಂಡ ನರೇಶ್ ಅಗರ್ವಾಲ್‌ ಪುತ್ರ ನಿತಿನ್‌, ಪಾಸಿ ಸಮುದಾಯದವರಿಗಾಗಿ ಸೋಮವಾರ ಆಯೋಜಿಸಿದ್ದ ಸಮ್ಮೇಳನದಲ್ಲಿ ಈ ತಿಂಡಿ ಪೊಟ್ಟಣಗಳನ್ನು ಹಂಚಲಾಗಿದೆ. ‘ತಿಂಡಿ ಪೊಟ್ಟಣಗಳನ್ನು ಗ್ರಾಮದ ಮುಖ್ಯಸ್ಥರಿಗೆ ನೀಡಲಾಗುತ್ತಿದ್ದು, ಅವರು ಪೊಟ್ಟಣಗಳ ಹಂಚಿಕೆ ಮಾಡಲಿದ್ದಾರೆ’ ಎಂದು ನಿತಿನ್‌ ಅಗರ್ವಾಲ್‌ ವೇದಿಕೆ ಮೇಲಿಂದ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.

’ಗ್ರಾಮಗಳ ಪ್ರಧಾನರು ತಿಂಡಿ ಪೊಟ್ಟಣ ಹಂಚುತ್ತಿರುವಲ್ಲಿಗೆ ಹೋಗಬೇಕು. ಅಲ್ಲಿ ಪೊಟ್ಟಣಗಳನ್ನು ಪಡೆದು ನಿಮ್ಮ ಜನರಿಗೆ ಹಂಚಬೇಕು’ ಎಂದು ಸೂಚನೆ ನೀಡಿದ್ದರು.

ADVERTISEMENT

ಸಮ್ಮೇಳನಕ್ಕೆ ಬಂದಿದ್ದ ಮಕ್ಕಳಿಂದ ಹಿಡಿದು ಹಿರಿಯವರೆಗೂ ಎಲ್ಲರಿಗೂ ಮದ್ಯದ ಬಾಟಲಿಗಳನ್ನು ಒಳಗೊಂಡ ಇದೇ ಪೊಟ್ಟಣಗಳನ್ನು ಹಂಚಿಕೆ ಮಾಡಲಾಗಿದೆ. ತಿಂಡಿಯೊಂದಿಗೆ ಇರುವ ಬಾಟಲಿಯಲ್ಲಿ ಇರುವುದು ಯಾವುದೇ ಹಣ್ಣಿನ ಪಾನೀಯವೋ, ತಂಪು ಪಾನೀಯವೋ ಅಥವಾ ಮತ್ತೇನೋ ತಿಳಿಯದೆ ಬಾಟಲಿಯನ್ನು ಜೇಬಿಗೆ ಇಳಿಸಿಕೊಳ್ಳುತ್ತಿದ್ದರು.

ಈ ಬಗ್ಗೆ ಹರ್ದೊಯಿ ಸಂಸದ ಅನ್ಷುಲ್‌ ವರ್ಮಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ವಿಚಾರವನ್ನು ಪಕ್ಷದ ಮುಖಂಡರಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ’ಪೆನ್‌ ಮತ್ತು ಪುಸ್ತಕಗಳನ್ನು ನೀಡುವ ಮಕ್ಕಳ ಕೈಗೆ ಮದ್ಯದ ಬಾಟಲಿಗಳನ್ನು ಅಗರ್ವಾಲ್‌ ಹಂಚಿದ್ದಾರೆ. ಇದೊಂದು ದುರ್ಘಟನೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮದ್ಯ ಹಂಚಿಕೆಯಾಗುತ್ತಿದ್ದರೂ ಅಬಕಾರಿ ಇಲಾಖೆ ಗಮನಕ್ಕೆ ಹೇಗೆ ಬರದಾಯಿತು?’ ಎಂದು ವರ್ಮಾ ಪ್ರಶ್ನಿಸಿದ್ದಾರೆ.

ಸಮಾಜವಾದಿ ಪಕ್ಷದ(ಎಸ್‌ಪಿ) ಮುಖಂಡರಾಗಿದ್ದ ನರೇಶ್ ಅಗರ್ವಾಲ್‌ 2018ರ ಮಾರ್ಚ್‌ನಲ್ಲಿ ಪುತ್ರ, ಶಾಸಕ ನಿತಿನ್‌ ಅಗರ್ವಾಲ್‌ ಮತ್ತು ಬೆಂಬಲಿಗರ ಸಹಿತ ಬಿಜೆಪಿ ಸೇರ್ಪಡೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.