ಬೆಂಗಳೂರು: ಮೋದಿ ಉಪನಾಮ ಸಂಬಂಧ ಟೀಕೆ ಮಾಡಿ 2 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ.
ಜನಪ್ರತಿನಿಧಿಗಳ ಕಾಯ್ದೆಯನ್ವಯ, ಜನಪ್ರತಿನಿಧಿಯೊಬ್ಬರು ಕನಿಷ್ಠ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾದರೆ, ತಕ್ಷಣದಿಂದಲೇ ಅವರ ಸದಸ್ಯತ್ವ ಅನರ್ಹಗೊಳ್ಳಲಿದೆ. ಹೀಗಾಗಿ ರಾಹುಲ್ ಗಾಂಧಿಯವರನ್ನು ಲೋಕಸಭೆ ಸಚಿವಾಲಯವು ಅನರ್ಹ ಮಾಡಿ ಆದೇಶಿಸಿದೆ.
ಈ ಹಿಂದೆ ಕೂಡ ಕ್ರಿಮಿನಲ್ ಮೊಕದ್ದಮೆಯಲ್ಲಿ ಜೈಲು ಶಿಕ್ಷೆಗೆ ಒಳಗಾಗಿ ಹಲವು ಮಂದಿ ಸಂಸದರು ಹಾಗೂ ಶಾಸಕರು ತಮ್ಮ ಸ್ಥಾನದಿಂದ ಅನರ್ಹಗೊಂಡಿದ್ದರು. ಅವರ ಪಟ್ಟಿ ಇಲ್ಲಿದೆ.
1. ಲಕ್ಷದ್ವೀಪ ಸಂಸದರಾಗಿದ್ದ ಮೊಹಮ್ಮದ್ ಫೈಝಲ್ ಅವರು ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿ ಸದಸ್ಯತ್ವ ಕಳೆದುಕೊಂಡಿದ್ದಾರೆ. 2023ರ ಜನವರಿ 13ಕ್ಕೆ ಅವರಿಗೆ ಶಿಕ್ಷೆ ಪ್ರಕಟವಾಗಿತ್ತು.
2. ಮೇವು ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿ ಆರ್‌ಜೆಡಿ ಮುಖ್ಯಸ್ಥ ತಮ್ಮ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡಿದ್ದರು. (2013)
3. ದ್ವೇಷ ಭಾಷಣ ಪ್ರಕರಣ ಸಂಬಂಧ ಸಮಾಜವಾದಿ ಸಂಸದ ಅಜಂ ಖಾನ್ ಅವರನ್ನು 2019ರಲ್ಲಿ ಕೋರ್ಟ್ ಶಿಕ್ಷೆ ನೀಡಿತ್ತು. ಹೀಗಾಗಿ ತಮ್ಮ ಸದಸ್ಯತ್ವದಿಂದ ಅನರ್ಹಗೊಂಡಿದ್ದರು.
ಇವರು ಮಾತ್ರ ಅಲ್ಲದೇ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ, ರಾಜ್ಯಸಭಾ ಸಂಸದ ರಶೀದ್ ಮಸೂದ್, ಹಾಗೂ ಶಾಸಕ ಅಬ್ದುಲ್ಲ ಅಜಂ ಖಾನ್ ಅನರ್ಹಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.