ನವದೆಹಲಿ: ಕಾನೂನು ಪ್ರಕ್ರಿಯೆಯು ಮಂದಗತಿಯಲ್ಲಿ ಸಾಗಿದರೆ ಕಕ್ಷಿದಾರರು ಭ್ರಮನಿರಸನಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ, ಹಳೇ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಹೈಕೋರ್ಟ್‌ಗಳು ಸೇರಿದಂತೆ ಕೋರ್ಟ್‌ಗಳಿಗೆ ಕೆಲ ನಿರ್ದೇಶನಗಳನ್ನು ನೀಡಿದೆ.
ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್, ಅರವಿಂದ ಕುಮಾರ್ ಅವರಿದ್ದ ಪೀಠವು, ಒಟ್ಟಾರೆ ಪರಿಸ್ಥಿತಿಯನ್ನು ಸುಧಾರಿಸಲು ನ್ಯಾಯಾಲಯ ಹಾಗೂ ವಕೀಲರ ಸಂಘಗಳ ಜಂಟಿ ಸಹಯೋಗ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿತು.
ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಕೋಶದ (ಎನ್‌ಜೆಡಜಿ) ಮಾಹಿತಿಯನ್ನು ಉಲ್ಲೇಖಿಸಿ, ಕೆಲವು ಪ್ರಕರಣಗಳು 50 ವರ್ಷಗಳಿಂದ ಬಾಕಿ ಉಳಿದಿವೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಲ್ಲಿ ಕೆಲ ಪ್ರಕರಣಗಳು 65 ವರ್ಷ ಕಳೆದರೂ ಇತ್ಯರ್ಥವಾಗಿಲ್ಲ ಎಂದು ಹೇಳಿತು.
ತ್ವರಿತ ವಿಚಾರಣೆ ಸಂಬಂಧ 11 ನಿರ್ದೇಶನಗಳನ್ನು ನೀಡಿದ ಪೀಠವು, ‘ಇದು, ನ್ಯಾಯ ಯಾರಿಗೂ ಕಾಯುವುದಿಲ್ಲ ಎಂಬ ಕಾಲಘಟ್ಟ. ಹೈಕೋರ್ಟ್‌ಗಳ ಎಲ್ಲ ಸಿಜೆಗಳಿಗೆ ಮನವಿ ಮಾಡಿದ್ದು, ಕೆಳಹಂತದ ಕೋರ್ಟ್‌ಗಳಿಗೆ ಸೂಚನೆಗಳನ್ನೂ ನೀಡಲಾಗಿದೆ’ ಎಂದು ತಿಳಿಸಿತು.
ಸಿವಿಲ್ ವಿವಾದದ ಸಂಬಂಧ ಉತ್ತರಾಖಂಡ ಹೈಕೋರ್ಟ್ ಆದೇಶ ಉಲ್ಲೇಖಿಸಿ ಯಶಪಾಲ್ ಜೈನ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ 43 ವರ್ಷದ ಹಿಂದೆ ಆರಂಭವಾಗಿದ್ದು, ಇನ್ನೂ ಪ್ರಗತಿಯಲ್ಲಿದೆ.
ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್ ಪೀಠವು, ಪ್ರಕರಣವನ್ನು ಆರು ತಿಂಗಳಲ್ಲಿ ಇತ್ಯರ್ಥಪಡಿಸಬೇಕು ಎಂದು ಕೆಳಹಂತದ ಕೋರ್ಟ್‌ಗೆ ಸೂಚಿಸಿತು. ಇದೇ ಸಂದರ್ಭದಲ್ಲಿ ಮೇಲಿನ ಅಭಿಪ್ರಾಯಗಳನ್ನು ಪೀಠ ವ್ಯಕ್ತಪಡಿಸಿತು.
ಹೈಕೋರ್ಟ್‌ಗಳು ಮತ್ತು ಕೆಳಹಂತದ ಕೋರ್ಟ್‌ಗಳಿಗೆ ನೀಡಲಾದ ನಿರ್ದೇಶನಗಳನ್ನು ತೀರ್ಪು ಪ್ರಕಟಿಸುವ ವೇಳೆ ಓದಲಾಗಿಲ್ಲ. ಈ ತೀರ್ಪನ್ನು ಕೋರ್ಟ್‌ನ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ ಬಳಿಕ ಈ ನಿರ್ದೇಶನಗಳ ವಿವರ ಗೊತ್ತಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.