ADVERTISEMENT

ಲಿವ್‌–ಇನ್‌ ಸಂಬಂಧ ತಾತ್ಕಾಲಿಕ: ಅಲಹಾಬಾದ್ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2023, 15:31 IST
Last Updated 24 ಅಕ್ಟೋಬರ್ 2023, 15:31 IST
ಅಲಹಾಬಾದ್ ಹೈಕೋರ್ಟ್
ಅಲಹಾಬಾದ್ ಹೈಕೋರ್ಟ್   

ಲಖನೌ: ಲಿವ್‌–ಇನ್‌ ಸಂಬಂಧಗಳು ‘ಸಮಯ ಕಳೆಯುವ’ ಉದ್ದೇಶದವು, ‘ತಾತ್ಕಾಲಿಕ’ವಾದುವು ಎಂದು ಹೇಳಿರುವ ಅಲಹಾಬಾದ್ ಹೈಕೋರ್ಟ್, ಅಂತರ್‌ಧರ್ಮೀಯ ಜೋಡಿಯೊಂದಕ್ಕೆ ತನಿಖೆಯಿಂದ ರಕ್ಷಣೆ ಒದಗಿಸಲು ನಿರಾಕರಿಸಿದೆ. ತಮಗೆ ಪೊಲೀಸ್ ರಕ್ಷಣೆ ಕೊಡಿಸಬೇಕು, ಯುವಕನ ವಿರುದ್ಧ ದಾಖಲಾಗಿರುವ ಅಪಹರಣ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಜೋಡಿಯು ಹೈಕೋರ್ಟ್ ಮೆಟ್ಟಿಲೇರಿತ್ತು.

ಇಂತಹ ಸಂಬಂಧಗಳಲ್ಲಿ ‘ಮೋಹ’ ಹೆಚ್ಚಿರುತ್ತದೆಯೇ ವಿನಾ ‘ಸ್ಥಿರತೆ ಮತ್ತು ಪ್ರಾಮಾಣಿಕತೆ’ ಅಲ್ಲ ಎಂದು ಕೂಡ ವಿಭಾಗೀಯ ನ್ಯಾಯಪೀಠ ಹೇಳಿದೆ. ನ್ಯಾಯಮೂರ್ತಿಗಳಾದ ರಾಹುಲ್ ಚತುರ್ವೇದಿ ಮತ್ತು ಎಂ.ಎ.ಎಚ್. ಇದ್ರಿಸಿ ಅವರು ಈ ಪೀಠದಲ್ಲಿ ಇದ್ದರು.

‘ಜೋಡಿಯು ವಿವಾಹ ಆಗುವುದಕ್ಕೆ ಒಪ್ಪದಿದ್ದರೆ ಅಥವಾ ಪರಸ್ಪರರ ವಿಚಾರವಾಗಿ ಪ್ರಾಮಾಣಿಕತೆ ಬೆಳೆಸಿಕೊಳ್ಳದಿದ್ದರೆ, ಅಂತಹ ಸಂಬಂಧಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಕೋರ್ಟ್‌ ಮುಂದಾಗುವುದಿಲ್ಲ’ ಎಂದು ಪೀಠ ಹೇಳಿದೆ.

ADVERTISEMENT

‘ಲಿವ್‌–ಇನ್ ಸಂಬಂಧಗಳಿಗೆ ಸುಪ್ರೀಂ ಕೋರ್ಟ್‌ ಹಲವು ಸಂದರ್ಭಗಳಲ್ಲಿ ಮಾನ್ಯತೆ ನೀಡಿದೆ ಎಂಬುದು ನಿಜ. ಆದರೆ, ಎರಡು ತಿಂಗಳ ಅವಧಿಯಲ್ಲಿ, 22 ಹಾಗೂ 20 ವರ್ಷ ವಯಸ್ಸಿನ ಎಳೆಯರ ಜೋಡಿಯು ತಮ್ಮ ಇಂತಹ ತಾತ್ಕಾಲಿಕ ಸಂಬಂಧದ ಬಗ್ಗೆ ಗಂಭೀರವಾಗಿ ಆಲೋಚಿಸಿರುತ್ತದೆ ಎಂದು ನಿರೀಕ್ಷಿಸಲಾಗದು’ ಎಂದು ಪೀಠ ಹೇಳಿದೆ.

‘ಜೀವನವೆಂಬುದು ಹೂವಿನ ಹಾಸಿಗೆಯಲ್ಲ. ಪ್ರತಿ ಜೋಡಿಯನ್ನು ಜೀವನವು ಕಠಿಣವಾಗಿ ಪರೀಕ್ಷಿಸುತ್ತದೆ. ಇಂತಹ ಸಂಬಂಧಗಳು ಸಮಯ ಕಳೆಯುವುದಕ್ಕೆ, ತಾತ್ಕಾಲಿಕವಾಗಿ ಇರುತ್ತವೆ ಎಂಬುದನ್ನು ನಮ್ಮ ಅನುಭವ ಹೇಳುತ್ತದೆ. ಹೀಗಾಗಿ, ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ನಾವು ಅರ್ಜಿದಾರರಿಗೆ ತನಿಖೆಯಿಂದ ಯಾವುದೇ ರಕ್ಷಣೆ ಒದಗಿಸುವುದಿಲ್ಲ’ ಎಂದು ಪೀಠ ತಿಳಿಸಿದೆ.

ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ನಡುವಿನ ಸಂಬಂಧದ ಪ್ರಕರಣ ಇದು. ತಾವು ಪ್ರೌಢರು, ಒಬ್ಬರನ್ನೊಬ್ಬರು ತಾವಾಗಿಯೇ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ. ವಯಸ್ಕರಾಗಿ ತಮಗೆ ತಮ್ಮ ಭವಿಷ್ಯವನ್ನು ತೀರ್ಮಾನಿಸುವ ಅಧಿಕಾರ ಇದೆ ಎಂದು ವಾದಿಸಿದ್ದಾರೆ.

ಯುವಕನು ಯುವತಿಯನ್ನು ಅಪಹರಿಸಿದ್ದಾನೆ ಎಂದು ಪೊಲೀಸರಲ್ಲಿ ದೂರು ನೀಡಲಾಗಿದೆ. ಈ ಯುವಕ ಒಬ್ಬ ‘ರೋಡ್ ರೋಮಿಯೊ’, ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ, ಅವನ ಜೊತೆ ಹೋದರೆ ಯುವತಿಗೆ ಭವಿಷ್ಯವೇ ಇರುವುದಿಲ್ಲ ಎಂದು ದೂರು ಸಲ್ಲಿಸಿರುವ ಯುವತಿಯ ಸಂಬಂಧಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.