ADVERTISEMENT

ಟಿ.ವಿ. ಕಾರ್ಯಕ್ರಮದಿಂದಾಗಿ ಪಾಲಕರ ಒಡಲು ಸೇರಿದ ರೈಲು ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕ

ಪಿಟಿಐ
Published 8 ಜೂನ್ 2023, 7:32 IST
Last Updated 8 ಜೂನ್ 2023, 7:32 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ಕಟಕ್ (ಒಡಿಶಾ): ಬಾಲೇಶ್ವರದಲ್ಲಿ ನಡೆದಿದ್ದ ತ್ರಿವಳಿ ರೈಲು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕನೊಬ್ಬ ಟಿ.ವಿ.ಯಲ್ಲಿನ ನೇರ ಪ್ರಸಾರ ಕಾರ್ಯಕ್ರಮದಿಂದ ಪಾಲಕರ ಮಡಿಲು ಸೇರಿದ ಅಪರೂಪದ ಪ್ರಕರಣ ಭುವನೇಶ್ವರದ ಏಮ್ಸ್‌ನಲ್ಲಿ ನಡೆದಿದೆ.

ಬಾಲೇಶ್ವರದಲ್ಲಿ ನಡೆದ ಮೂರು ರೈಲುಗಳ ಅಪಘಾತದಲ್ಲಿ ಗಾಯಗೊಂಡಿದ್ದ ರಾಮನಂದ ಪಾಸ್ವಾನ್ (15) ಎಂಬ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆ ಇಲ್ಲಿನ ಏಮ್ಸ್‌ಗೆ ದಾಖಲಿಸಲಾಗಿತ್ತು. ಆತನಿಗೆ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಅಳವಡಿಸಿದ್ದ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ ವೀಕ್ಷಿಸಿದ ರಾಮನಂದ, ಅಲ್ಲಿ ಪ್ರಸಾರವಾದ ಸಂದರ್ಶನದಲ್ಲಿ ತನ್ನ ಪಾಲಕರನ್ನು ಗುರುತಿಸಿದ. ತಕ್ಷಣ ಕಾರ್ಯಪ್ರವೃತ್ತರಾದ ಆಸ್ಪತ್ರೆ ಸಿಬ್ಬಂದಿ ಬಾಲಕನನ್ನು ಪಾಲಕರೊಂದಿಗೆ ಸೇರಿಸುವಲ್ಲಿ ಸಫಲರಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಾಲಕನ ತಂದೆ ಹರಿ ಪಾಸ್ವಾನ್, ’ಮಗ ಸಿಕ್ಕಿದ್ದು ಸಂತಸ ತಂದಿದೆ. ಕುಟುಂಬದ ಇತರ ಮೂವರು ಸದಸ್ಯರೊಂದಿಗೆ ರಾಮನಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಉಳಿದವರೆಲ್ಲರೂ ಮೃತಪಟ್ಟಿದ್ದಾರೆ. ಆದರೆ ರಾಮನಂದ ಒಂದಷ್ಟು ಗಾಯಗಳೊಂದಿಗೆ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾನೆ‘ ಎಂದಿದ್ದಾರೆ.

ADVERTISEMENT

ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಅಧಿಕಾರಿ ಡಾ. ಬಿ.ಎನ್.ಮೋಹರಾಣಾ ಪ್ರತಿಕ್ರಿಯಿಸಿ, ’ಬಾಲಕ ತನ್ನ ಪಾಲಕರನ್ನು ಗುರುತಿಸಿದ ತಕ್ಷಣ ಟಿ.ವಿ. ಚಾನಲ್‌ ಅನ್ನು ಸಂಪರ್ಕಿಸಲಾಯಿತು. ಅದರ ವಿಡಿಯೊ ತರಿಸಿ ಮತ್ತೊಮ್ಮೆ ತೋರಿಸಲಾಯಿತು. ತನ್ನ ಪಾಲಕರನ್ನು ರಾಮದಾನ್ ಗುರುತಿಸಿದ. ಹೀಗಾಗಿ ಆತನ ಪಾಲಕರನ್ನು ಆಸ್ಪತ್ರೆಗೆ ಕರೆಯಿಸಲಾಯಿತು‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.