ADVERTISEMENT

LIVE– 75ನೇ ಸ್ವಾತಂತ್ರ್ಯ ಸಂಭ್ರಮ| ಆತ್ಮನಿರ್ಭರ ಭಾರತ ಜನಾಂದೋಲನವಾಗಲಿ ಎಂದ ಪ್ರಧಾನಿ

ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ತೇಲಾಡುತ್ತಿದೆ. ‘ಪ್ರತಿ ಮನೆಗೂ ತ್ರಿವರ್ಣ ಧ್ವಜ’ ಅಭಿಯಾನದಿಂದಾಗಿ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದೆಲ್ಲೆಡೆ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪು ಕೋಟೆ ಮೇಲೆ ಸತತ 9ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದ್ದಾರೆ. ಪ್ರಧಾನಿ ಭಾಷಣದ ಅಪ್ಡೇಟ್‌ ಇಲ್ಲಿ ಸಿಗಲಿದೆ.

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 3:45 IST
Last Updated 15 ಆಗಸ್ಟ್ 2022, 3:45 IST

ಭಾಷಣ ಮುಕ್ತಾಯಗೊಳಿಸಿದ ಪ್ರಧಾನಿ

ಎರಡು ಸವಾಲುಗಳಿವೆ ಎಂದ ಪ್ರಧಾನಿ

ದೇಶದ ಮುಂದಿರುವ ಎರಡು ದೊಡ್ಡ ಸವಾಲುಗಳೆಂದರೆ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ. ಇವುಗಳ ವಿರುದ್ಧದ ಹೋರಾಟದಲ್ಲಿ ನಾನು ಎಲ್ಲಾ ಭಾರತೀಯರ ಬೆಂಬಲವನ್ನು ಕೋರುತ್ತೇನೆ.

ಭ್ರಷ್ಟಾಚಾರವು ಗೆದ್ದಲಿನ ಹಾಗೆ ದೇಶವನ್ನು ಹಾಳು ಮಾಡುತ್ತಿದೆ. ದೇಶವು ಅದರ ವಿರುದ್ಧ ಹೋರಾಡಬೇಕಾಗಿದೆ.

ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿನ ನಮ್ಮ ಅದ್ಭುತ ಪ್ರದರ್ಶನವು, ಭಾರತದ ಮಿನುಗುವ ಪ್ರತಿಭೆಗೆ ಉದಾಹರಣೆಗಳಾಗಿವೆ. ನಾವು ಅಂತಹ ಪ್ರತಿಭೆಗಳನ್ನು ಉತ್ತೇಜಿಸಬೇಕು. 

ADVERTISEMENT

ದೇಶವನ್ನು ಲೂಟಿ ಮಾಡಿದರಿಂದಲೇ, ದೇಶಕ್ಕೆ ಮರುಪಾವತಿ ಮಾಡಿಸುವ ನಿಟ್ಟಿನಲ್ಲೇ ನಮ್ಮ ಪ್ರಯತ್ನ ನಡೆದಿದೆ. 

ಕೋಟಿ ಸಮಸ್ಯೆಗಳಿದ್ದರೂ, ಕೋಟಿ ಪರಿಹಾರಗಳಿವೆ. 130 ಕೋಟಿ ಜನರು ಒಂದು ಹೆಜ್ಜೆ ಮುಂದಿಟ್ಟರೆ, ದೇಶವು 130 ಕೋಟಿ ಹೆಜ್ಜೆಗಳನ್ನು ಮುಂದಕ್ಕಿಟ್ಟಂತೆ. 

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆರಂಭವಾಗಿದೆ. ಅದರ ಫಲಿತಾಂಶಕ್ಕಾಗಿ ಪ್ರತಿಯೊಬ್ಬರ ಪ್ರಯತ್ನ ಅಗತ್ಯವಾಗಿದೆ. ಇದೇ ‘ಟೀಮ್ ಇಂಡಿಯಾ'ಗೆ ಕರೆ ಎಂದು ಮೋದಿ ಹೇಳಿದ್ದಾರೆ. 

ಪರಿವಾರವಾದದ ಬಗ್ಗೆ ಆತಂಕ

ಕಾನೂನು, ಶಿಕ್ಷಣ, ವಿಜ್ಞಾನ ಮತ್ತು ಪೋಲೀಸ್‌ ಇಲಾಖೆಯಲ್ಲಿನ 'ನಾರಿ ಶಕ್ತಿ'ಯನ್ನು ಗಮನಿಸಿದರೆ ನಮ್ಮ ಹೆಣ್ಣುಮಕ್ಕಳು ಮತ್ತು ತಾಯಂದಿರು ಭಾರತಕ್ಕೆ ಪ್ರಮುಖ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂಬುದು ತಿಳಿಯಲಿದೆ. 

ರಾಜ್ಯಗಳ ನಡುವೆ ‘ಸಹಕಾರಿ ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆ’ಯನ್ನು ಉತ್ತೇಜಿಸುವ ಅವಶ್ಯಕತೆಯಿದೆ.

ಭಾರತ ಬಡತನದ ವಿರುದ್ಧ ಹೋರಾಡುತ್ತಿವೆ. ಹೀಗಾಗಿ ಭ್ರಷ್ಟಾಚಾರದ ವಿರುದ್ಧವೂ ನಾವು ನಮ್ಮೆಲ್ಲ ಶಕ್ತಿಯಿಂದ ಹೋರಾಡಬೇಕಾಗಿದೆ. 

ನಮಗೆ ಹಲವು ಸವಾಲುಗಳು, ಹಲವು ನಿರ್ಬಂಧಗಳು, ಹಲವು ಸಮಸ್ಯೆಗಳಿವೆ ಆದರೆ ನವ ಭಾರತಕ್ಕಾಗಿ ಅವುಗಳನ್ನು ಜಯಿಸುವ ಸಾಮರ್ಥ್ಯ ನಮಗಿದೆ: ಪ್ರಧಾನಿ

ರಾಜ್ಯಗಳು ಒಟ್ಟಿಗೆ ಕೆಲಸ ಮಾಡಬೇಕು. ನಾವು ವಿಭಿನ್ನ ಕಾರ್ಯಕ್ರಮಗಳನ್ನು ಹೊಂದಿರಬಹುದು, ಆದರೆ, ವಿಭಿನ್ನ ರಾಷ್ಟ್ರದ ಕನಸುಗಳನ್ನು ಹೊಂದಿಲ್ಲ. 

'ಪರಿವಾರವಾದ' (ಸ್ವಜನಪಕ್ಷಪಾತ) ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಕೆಲವರು ತಮ್ಮ ಅಕ್ರಮ ಸಂಪತ್ತನ್ನು ರಕ್ಷಿಸಿಕೊಳ್ಳುವ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು. ಕಳೆದ 8 ವರ್ಷಗಳಲ್ಲಿ ಆಧಾರ್, ಡಿಬಿಟಿ, ಮೊಬೈಲ್ ಬಳಸಿ ₹2 ಲಕ್ಷ ಕೋಟಿ ಕಪ್ಪುಹಣ ಪತ್ತೆ ಮಾಡಲಾಗಿದೆ. 

ಭ್ರಷ್ಟರು ಹಾಗೂ ಭ್ರಷ್ಟಾಚಾರದ ವಿರುದ್ಧ ನಾವು ಎಚ್ಚರದಿಂದಿರಬೇಕು. 

ಭ್ರಷ್ಟರಿಗೆ ಶಿಕ್ಷೆ ವಿಧಿಸುವ ಮನಸ್ಥಿತಿ ಜನರಲ್ಲಿ ಇಲ್ಲದಿದ್ದರೆ, ದೇಶವು ಗರಿಷ್ಠ ವೇಗದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. 

ನಮ್ಮ ಅನೇಕ ಸಂಸ್ಥೆಗಳು ಕುಟುಂಬ ಆಡಳಿತದಿಂದ ಪ್ರಭಾವಿತವಾಗಿವೆ. ಇದು ನಮ್ಮ ಪ್ರತಿಭೆ, ರಾಷ್ಟ್ರದ ಸಾಮರ್ಥ್ಯಕ್ಕೆ ದಕ್ಕೆಯುಂಟು ಮಾಡಲಿದೆ. ಅಲ್ಲದೇ ಭ್ರಷ್ಟಾಚಾರಕ್ಕೆ ಕಾರಣವಾವಾಗಲಿದೆ ಎಂದು ಮೋದಿ ಹೇಳಿದರು. 
 

ಬಾಹ್ಯಾಕಾಶ ಕ್ಷೇತ್ರದಿಂದ ಹಿಡಿದು,  ಡ್ರೋನ್ ತಯಾರಿಕೆಯಿಂದ ನೈಸರ್ಗಿಕ ಕೃಷಿ ಮಾಡು ವರೆಗೆ, ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ವೇಗವಾಗಿ ಪ್ರಗತಿ ಸಾಧಿಸುತ್ತಿದೆ.

ನೈಸರ್ಗಿಕ ಕೃಷಿ ಭಾರತಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ. ಹಸಿರು ಉದ್ಯೋಗಗಳ ಸೃಷ್ಟಿಯೊಂದಿಗೆ ಬಹು ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ. 

ಡಿಜಿಟಲ್ ತಂತ್ರಜ್ಞಾನದ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿವೆ. 

5G, ಚಿಪ್ ತಯಾರಿಕೆ, ಡಿಜಿಟಲ್ ಇಂಡಿಯಾದ ಮೂಲಕ ತಳಮಟ್ಟದಲ್ಲಿ ಕ್ರಾಂತಿಯನ್ನು ತರುತ್ತಿದ್ದೇವೆ.

ಭಾರತದ ಕೈಗಾರಿಕಾ ಬೆಳವಣಿಗೆಯು ತಳಮಟ್ಟದಿಂದ ಆಗಬೇಕಾಗಿದೆ. ನಮ್ಮ ಎಂಎಸ್‌ಎಂಇಗಳು, ಬೀದಿ ವ್ಯಾಪಾರಿಗಳು ಮತ್ತು ಸಂಘಟಿತ ವಲಯದಲ್ಲಿರುವವರನ್ನು ಬಲಪಡಿಸಬೇಕಾಗಿದೆ.

ಉತ್ಪಾದನಾ ರಂಗದಲ್ಲಿ ಇತಿಹಾಸ ಸೃಷ್ಟಿಸುತ್ತಿರುವ ಭಾರತ

ಕೆಂಪು ಕೋಟೆಯ ‘ಗನ್‌ ಸಲ್ಯೂಟ್‌’ಗೆ 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ತಯಾರಿಸಿದ ಬಂದೂಕು ಬಳಸಲಾಗಿದೆ. 

ಭಾರತವು ಉತ್ಪಾದನಾ ರಂಗದಲ್ಲಿ ಇತಿಹಾಸ ನಿರ್ಮಿಸುತ್ತಿದೆ. 

ಆಮದು ಮಾಡಿಕೊಂಡ ಆಟಿಕೆಗಳನ್ನು ನಿರಾರಿಸಿದ ಮಕ್ಕಳಿಗೆ ನನ್ನದೊಂದು ಸಲಾಮು. 5 ವರ್ಷದ ಮಗುವೊಂದು ವಿದೇಶಿ ವಸ್ತು ಬೇಡವೆಂದಿತು ಎಂದರೆ 'ಆತ್ಮನಿರ್ಭರ ಭಾರತ' ನಮಲ್ಲಿ ರಕ್ತಗತವಾಗಿದೆ ಎಂದರ್ಥ. 

ಪಿಎಲ್‌ಐ ಯೋಜನೆಗಳ ಮೂಲಕ ನಾವು ಪ್ರಪಂಚದ ಉತ್ಪಾದನಾ ಶಕ್ತಿಯಾಗಿ ಮಾರ್ಪಾಡು ಹೊಂದುತ್ತಿದ್ದೇವೆ. 'ಮೇಕ್ ಇನ್ ಇಂಡಿಯಾ' ಯೋಜನೆಯಲ್ಲಿ ಪಾಲ್ಗೊಳ್ಳಲು ಜನ ಭಾರತಕ್ಕೆ ಬರುತ್ತಿದ್ದಾರೆ. 

ಆತ್ಮನಿರ್ಭರ ಭಾರತ ಉಪಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಲು ಖಾಸಗಿ ವಲಯಕ್ಕೆ ಮೋದಿ ಕರೆ ನೀಡಿದರು. ಭಾರತವು ಜಗತ್ತಿಗಾಗಿ ಉತ್ಪಾದನೆ ಮಾಡುವಷ್ಟು ಶಕ್ತವಾಗಿದೆ ಎಂದು ಅವರು ಹೇಳಿದರು. 

ಆತ್ಮನಿರ್ಭರ ಭಾರತ ಜನಾಂದೋಲನವಾಗಲಿ

'ಆತ್ಮನಿರ್ಭರ ಭಾರತ'ಕ್ಕೆ ಒತ್ತು ನೀಡಿದ ಪ್ರಧಾನಮಂತ್ರಿ, ಈ ಕಲ್ಪನೆಯನ್ನು 'ಜನಾಂದೋಲನ’ದಂತೆ ಮುಂದುವರಿಸಿಕೊಂಡು ಹೋಗುವ ಅಗತ್ಯ ಪ್ರತಿಪಾದಿಸಿದ್ದಾರೆ. 

‘ಭಾರತ ಮೊದಲು’ ಎಂಬ ಮೂಲಮಂತ್ರ ಪ್ರತಿಪಾದಿಸಿದ ಪ್ರಧಾನಿ

‌ಭಾರತದ ಪ್ರಗತಿಗೆ ಸಮಾನತೆ ಆಧಾರವಾಗಿದೆ. ‘ಭಾರತ ಮೊದಲು’ ಎಂಬ ಮೂಲ ಮಂತ್ರದೊಂದಿಗೆ ನಾವು ಒಟ್ಟಾಗಿದ್ದೇವೆ ಎಂಬುದನ್ನು ಸಾಬೀತುಪಡಿಸಬೇಕಾಗಿದೆ. 

ನಮ್ಮ ನಡವಳಿಕೆಯಲ್ಲಿ ಅಸ್ಪಷ್ಟತೆ ನುಸುಳಿದೆ ಮತ್ತು ನಾವು ಕೆಲವೊಮ್ಮೆ ಮಹಿಳೆಯರನ್ನು ಅವಮಾನಿಸುತ್ತೇವೆ. ಇದನ್ನು ನಮ್ಮ ನಡವಳಿಕೆಯಿಂದಲೇ ಕಿತ್ತುಹಾಕುವ ಪ್ರತಿಜ್ಞೆ ಮಾಡಬಹುದೇ? ಮಹಿಳೆಯರನ್ನು ಗೌರವಿಸುವುದು ಭಾರತದ ಬೆಳವಣಿಗೆಯ ಆಧಾರವಾಗಿದೆ. ನಾವು ನಮ್ಮ 'ನಾರಿ ಶಕ್ತಿ'ಗೆ ಬೆಂಬಲ ನೀಡಬೇಕಾಗಿದೆ
 

ಪ್ರತಿಯೊಂದು ರಂಗದಲ್ಲೂ ಸುಧಾರಣೆ

ನವೀಕರಿಸಬಹುದಾದ ಇಂಧನದಿಂದ ಹಿಡಿದು,  ವೈದ್ಯಕೀಯ ಶಿಕ್ಷಣಕ್ಕಾಗಿ ಉತ್ತಮ ಮೂಲಸೌಕರ್ಯಗಳವರೆಗೆ... ಭಾರತವು ಪ್ರತಿಯೊಂದು ರಂಗದಲ್ಲೂ ಸುಧಾರಣೆ ಸಾಧಿಸಿದೆ. 

ಕೆಲವೊಮ್ಮೆ ನಮ್ಮ ಪ್ರತಿಭೆ ಭಾಷೆಯ ಅಡೆತಡೆಗಳು ಎದುರಾಗುತ್ತವೆ. ಆದರೆ,  ನಮ್ಮ ದೇಶದ ಪ್ರತಿಯೊಂದು ಭಾಷೆಯ ಬಗ್ಗೆ ನಾವು ಹೆಮ್ಮೆಪಡಬೇಕು

ಪ್ರಕೃತಿಯು ಭಾರತದ ಪರಂಪರೆಯ ಪ್ರಮುಖ ಭಾಗವಾಗಿದೆ. ಹವಾಮಾನ ಬದಲಾವಣೆಯನ್ನು ಎದುರಿಸಲು ಸಹಾಯ ಮಾಡುವ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ನಾವು ಈಗಾಗಲೇ ಹೊಂದಿದ್ದೇವೆ.

‘ದೇಶದ ಅಭಿವೃದ್ಧಿಗೆ 25 ವರ್ಷ ಮುಡಿಪಿಡಿ’

ದೇಶದ ಅಭಿವೃದ್ಧಿಗಾಗಿ ಯುವಕರು ತಮ್ಮ ಜೀವನದ ಮುಂದಿನ 25 ವರ್ಷಗಳನ್ನು ಮುಡಿಪಾಗಿಡಬೇಕು ಎಂದು ನಾನು  ಒತ್ತಾಯಿಸುತ್ತೇನೆ. – ಮೋದಿ 

2047ಕ್ಕೆ 5 ಪ್ರತಿಜ್ಞೆ

2047 ರ ವೇಳೆಗೆ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ನಾಗರಿಕರು 5 ಪ್ರತಿಜ್ಞೆ ಮಾಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು. 
ಅಭಿವೃದ್ಧಿ ಹೊಂದಿದ ಭಾರತ, ದಾಸ್ಯದ ಸಂಕೇತಗಳನ್ನು ತೊಡೆದುಹಾಕುವುದು, ಪರಂಪರೆಯಲ್ಲಿ ಹೆಮ್ಮೆ ಹೊಂದುವುದು, ಏಕತೆ ಮತ್ತು ನಮ್ಮ ಕರ್ತವ್ಯಗಳನ್ನು ನಿಭಾಯಿಸುವುದೇ ಆ ಐದು ಪ್ರತಿಜ್ಞೆಗಳು ಎಂದು ಮೋದಿ ಹೇಳಿದರು. 
 

'ತ್ರಿಶಕ್ತಿ'ಯ ಪ್ರಸ್ತಾಪ

ಮಹತ್ವಾಕಾಂಕ್ಷೆ, ನವೋದಯ ಮತ್ತು ವಿಶ್ವದ ನಿರೀಕ್ಷೆ ಎಂಬ 'ತ್ರಿಶಕ್ತಿ' ಬಗ್ಗೆ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. 

ಕೋವಿಡ್‌ ವಿರುದ್ಧ ಹೋರಾಡಲು ನಾಗರಿಕರು ಒಗ್ಗೂಡಿದ್ದರು. ವೈದ್ಯರನ್ನು ಬೆಂಬಲಿಸುವುದರಿಂದ ಹಿಡಿದು ದೂರದ ಭಾಗಗಳಿಗೆ ಲಸಿಕೆಗಳನ್ನು ತಲುಪಿಸುವವರೆಗೆ ನಾವು ಸಾಂಕ್ರಾಮಿಕದ ವಿರುದ್ಧ ಒಟ್ಟಾಗಿ ಹೋರಾಡಿದ್ದೇವೆ ಎಂದು ಅವರು ತಿಳಿಸಿದರು. 
 

ನಮ್ಮ ಅಭಿವೃದ್ಧಿಯನ್ನು ಅನುಮಾನಿಸಿದ್ದರು

ನಾವು ಸ್ವಾತಂತ್ರ್ಯವನ್ನು ಪಡೆದಾಗ ನಮ್ಮ ಅಭಿವೃದ್ಧಿಯ ಬಗ್ಗೆ ಹಲವರು ಅನುಮಾನಿಸಿದ್ದರು. ಆದರೆ, ಈ ನಾಡಿನ ಜನರಲ್ಲಿ ವಿಶೇಷತೆ ಇದೆ ಎಂದು ಅವರಿಗೆ ತಿಳಿದಿರಲಿಲ್ಲ. ಈ ಮಣ್ಣಿನ ವಿಶೇಷ ಏನೆಂಬುದು ಅವರಿಗೆ ಗೊತ್ತಿರಲಿಲ್ಲ

ಭಾರತವು ಮಹತ್ವಾಕಾಂಕ್ಷೆಯ ರಾಷ್ಟ್ರ. ಒಗ್ಗಟ್ಟಿನ ಮನೋಭಾವದೊಂದಿಗೆ ಬದಲಾವಣೆಗಳನ್ನು ತರಲಾಗುತ್ತಿದೆ. ಭಾರತದ ನಾಗರಿಕರು ಸಕಾರಾತ್ಮಕ ಬದಲಾವಣೆಗಳನ್ನು ಬಯಸುತ್ತಾರೆ ಮತ್ತು ಅದಕ್ಕೆ ಕೊಡುಗೆ ನೀಡಲು ಬಯಸುತ್ತಾರೆ. 

ಬುಡಕಟ್ಟು ನಾಯಕರ ಹೋರಾಟ ಸ್ಮರಿಸಿದ ಮೋದಿ

ಬುಡಕಟ್ಟು ಸಮುದಾಯದ ನಾಯಕರ ಹೋರಾಟದ ಉಲ್ಲೇಖ  ನಾವು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತನಾಡುವಾಗ, ಬುಡಕಟ್ಟು ಸಮುದಾಯವನ್ನು ಮರೆಯಲು ಸಾಧ್ಯವಿಲ್ಲ. ಭಗವಾನ್ ಬಿರ್ಸಾ ಮುಂಡಾ, ಸಿಧು-ಕನ್ಹು, ಅಲ್ಲೂರಿ ಸೀತಾರಾಮ ರಾಜು, ಗೋವಿಂದ್ ಗುರು ಮುಂತಾದವರು ಸ್ವಾತಂತ್ರ್ಯ ಹೋರಾಟದ ಧ್ವನಿಯಾಗಿದ್ದರು. ಮಾತೃಭೂಮಿಯ ರಕ್ಷಣೆಗಾಗಿ ಈ ನಾಯಕರು ಬುಡಕಟ್ಟು ಸಮುದಾಯದಲ್ಲಿ ಹೋರಾಟದ  ಕಿಚ್ಚು ಹಚ್ಚಿದ್ದರು ಎಂದು ಪ್ರಧಾನಿ ಹೇಳಿದರು.

ಭಾರತ ಪ್ರಜಾಪ್ರಭುತ್ವದ ತಾಯಿ

ನೆಹರೂ, ಪಟೇಲ್‌, ರಾಜೇಂದ್ರ ಪ್ರಸಾದ್‌ರನ್ನು ನೆನಪಿಸಿಕೊಂಡ ಮೋದಿ

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಾಗಲಿ, ದೇಶವನ್ನು ಕಟ್ಟಿದವರಾಗಲಿ ಅವರಿಗೆ ಶಿರಬಾಗಿ ನಮಿಸುವ ದಿನವಿದು ಎಂದು ಹೇಳಿದ ನರೇಂದ್ರ ಮೋದಿ ಅವರು,  ಡಾ.ರಾಜೇಂದ್ರ ಪ್ರಸಾದ್, ನೆಹರೂ, ಸರ್ದಾರ್ ಪಟೇಲ್, ಎಸ್‌ಪಿ ಮುಖರ್ಜಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ, ದೀನದಯಾಳ್ ಉಪಾಧ್ಯಾಯ, ಜೆಪಿ ನಾರಾಯಣ್, ಲೋಹಿಯಾ, ವಿನೋಬಾ ಭಾವೆ, ನಾನಾಜಿ ದೇಶಮುಖ್, ಸುಬ್ರಮಣ್ಯ ಭಾರತಿ ಮುಂತಾದವರನ್ನು ಸ್ಮರಿಸಿದರು. 
 

ನಾರಾಯಣ ಗುರು, ಸ್ವಾಮಿ ವಿವೇಕಾನಂದ, ರವೀಂದ್ರನಾಥ ಠಾಗೂರರ ಸ್ಮರಣೆ

ರಾಷ್ಟ್ರದ ಪ್ರಜ್ಞೆಯನ್ನು ಜಾಗೃತಗೊಳಿಸಿದ ನಾರಾಯಣ ಗುರು, ಸ್ವಾಮಿ ವಿವೇಕಾನಂದ ಮತ್ತು ರವೀಂದ್ರನಾಥ ಠಾಗೋರ್ ಅವರಿಗೆ ಪ್ರಧಾನಿ ಮೋದಿ ಗೌರವ ಸಲ್ಲಿಸಿದ್ದಾರೆ
 

ದೇಶಕ್ಕೆ ದುಡಿದವರ ಸ್ಮರಿಸುವ ದಿನ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವು ನಮ್ಮ ಅನೇಕ ರಾಷ್ಟ್ರನಾಯಕರನ್ನು ಸ್ಮರಿಸಿದ್ದೇವೆ. ಆಗಸ್ಟ್ 14 ರಂದು, ನಾವು ವಿಭಜನೆಯ ಭೀಕರತೆಯನ್ನು ನೆನಪಿಸಿಕೊಂಡಿದ್ದೇವೆ. ಕಳೆದ 75 ವರ್ಷಗಳಲ್ಲಿ ನಮ್ಮ ದೇಶವನ್ನು ಮುನ್ನಡೆಸಲು ಕೊಡುಗೆ ನೀಡಿದ ದೇಶದ ಎಲ್ಲಾ ನಾಗರಿಕರನ್ನು ಇಂದು ನೆನಪಿಸಿಕೊಳ್ಳುವ ದಿನವಾಗಿದೆ ಎಂದು ಮೋದಿ ಹೇಳಿದರು. 

ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ್ದಾರೆ. ಹೋರಾಟದಲ್ಲಿನ ಮಹಿಳೆಯರ ಪಾತ್ರವನ್ನೂ ಅವರು ಕೊಂಡಾಡಿದರು. ರಾಣಿ ಲಕ್ಷ್ಮೀಬಾಯಿ, ಝಲ್ಕರಿ ಬಾಯಿ, ಚೆನ್ನಮ್ಮ ಅವರ ಹೋರಾಟ ನೆನಪಿಸಿಕೊಂಡರೆ ಮನದಲ್ಲಿ ಗೌರವ ಮೂಡುತ್ತದೆ ಎಂದು ಅವರು ಹೇಳಿದರು. 

ಕೆಂಪುಕೋಟೆ ಮೇಲಿನ ಧ್ವಜಾರೋಹಣ, ಪ್ರಧಾನಿ ಭಾಷಣದ ಲೈವ್‌ ವೀಕ್ಷಿಸಿ

ಭಾರತೀಯರು ಮತ್ತು ಭಾರತವನ್ನು ಪ್ರೀತಿಸುವವರಿಗೆ ಮೋದಿ ಅಭಿನಂದನೆ

ಈ ಸ್ವಾತಂತ್ರ್ಯ ದಿನದಂದು ನಾನು ಎಲ್ಲಾ ಭಾರತೀಯರು ಮತ್ತು ಭಾರತವನ್ನು ಪ್ರೀತಿಸುವವರನ್ನು ಅಭಿನಂದಿಸುತ್ತೇನೆ. ಹೊಸ ಸಂಕಲ್ಪದೊಂದಿಗೆ, ಹೊಸ ದಿಕ್ಕಿನತ್ತ ಹೆಜ್ಜೆ ಹಾಕುವ ದಿನವಿದು

ಸತತ 9ನೇ ಬಾರಿಗೆ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು

ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ರಕ್ಷಣಾ ಸಚಿವರು ಬರಮಾಡಿಕೊಂಡರು

ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.