ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿರುವ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ‘ನನ್ನ ನಿಲುವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ’ ಎಂದು ಬಣ್ಣಿಸಿದ್ದಾರೆ.
‘ಸುಪ್ರೀಂ ಕೋರ್ಟ್ ಸರ್ವಾನುಮತದಿಂದ ತೀರ್ಪು ನೀಡುವ ಮೂಲಕ ರಾಮ ಮಂದಿರ ನಿರ್ಮಿಸಲು ಬಹುದೊಡ್ಟ ಆಶೀರ್ವಾದ ದೊರೆತಿದೆ’ ಎಂದು ಹೇಳಿದ್ದಾರೆ.
’ರಾಮ ಮಂದಿರ ನಿರ್ಮಿಸಲು ನಡೆದ ಸಾಮೂಹಿಕ ಆಂದೋಲನಕ್ಕೆ ನನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಲು ದೇವರು ಅವಕಾಶ ಕಲ್ಪಿಸಿದ್ದ. ಇದುವರೆಗಿನ ಎಲ್ಲ ವಿವಾದಗಳು ಮತ್ತು ದ್ವೇಷಗಳನ್ನು ದೂರವಿಟ್ಟು ಕೋಮು ಸೌಹಾರ್ದತೆ ಮತ್ತು ಶಾಂತಿ ಸ್ಥಾಪಿಸುವ ಕಾಲ ಇದೀಗ ಬಂದಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಾಗೋಣ’ ಎಂದಿದ್ದಾರೆ.
‘ಸ್ವಾತಂತ್ರ್ಯ ಹೋರಾಟದ ಬಳಿಕ ದೇಶದಲ್ಲಿ ಅತಿ ದೊಡ್ಡ ಚಳವಳಿ ರಾಮ ಮಂದಿರಕ್ಕಾಗಿ ನಡೆಯಿತು. ರಾಮ ಮತ್ತು ರಾಮಾಯಣ ಭಾರತದ ಸಾಂಸ್ಕೃತಿಕ ಮತ್ತು ನಾಗರಿಕ ಪರಂಪರೆಯಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿವೆ. ಅದೇ ರೀತಿ ದೇಶದ ಕೋಟ್ಯಂತರ ಜನರ ಹೃದಯದಲ್ಲಿ ರಾಮ ಜನ್ಮಭೂಮಿ ವಿಶೇಷ ಮತ್ತು ಪವಿತ್ರ ಸ್ಥಾನ ಪಡೆದುಕೊಂಡಿದೆ. ಈ ಜನರ ನಂಬಿಕೆ ಮತ್ತು ಭಾವನೆಗಳನ್ನು ಗೌರವಿಸಿರುವುದು ಶ್ಲಾಘನೀಯ’ ಎಂದು ವಿಶ್ಲೇಷಿಸಿದ್ದಾರೆ.
’ಬಹು ಸುದೀರ್ಘವಾದ ಮಂದಿರ–ಮಸೀದಿ ವಿವಾದ ಅಂತ್ಯವಾಗಿದೆ. ಇನ್ನು ಮುಂದೆ ದೇಶದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸಲು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು’ ಎಂದು ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.