ಗುವಾಹಟಿ: ಅಸ್ಸಾಂನ ಗೋಲ್ಪರಾ ಜಿಲ್ಲೆಯಲ್ಲಿರುವ ಮದರಸಾವನ್ನು ಜಿಹಾದಿ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಮದರಸಾ ಮತ್ತು ಅದಕ್ಕೆ ಹೊಂದಿಕೊಂಡಿದ್ದ ನಿವಾಸವನ್ನು ಸ್ಥಳೀಯರುಮಂಗಳವಾರ ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದಇಬ್ಬರು ಪ್ರಜೆಗಳು ಮದರಸಾ ಆವರಣದಲ್ಲಿ ಜಿಹಾದಿ ಚಟುವಟಿಕೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.ಅಸ್ಸಾಂ ಪೊಲೀಸರಿಗೆ ಬೇಕಾಗಿದ್ದ ಅಮೀನುಲ್ ಇಸ್ಲಾಮ್ ಅಲಿಯಾಸ್ ಉಸ್ಮಾನ್ ಮತ್ತು ಜಹಾಂಗೀರ್ ಆಲೊಮ್ ಎನ್ನುವ ಇಬ್ಬರು ಈ ಮದರಸಾದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಇವರು ತಲೆಮರೆಸಿಕೊಂಡಿದ್ದು, ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ ಕೈದಾ ಉಗ್ರಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ನಿಷೇಧಿತ ಉಗ್ರಸಂಘಟನೆ ಅನ್ಸಾರುಲ್ಲಾ ಬಾಂಗ್ಲಾ ಟೀಮ್‌ನ ಸದಸ್ಯರಾಗಿದ್ದ ಇವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಮೋರಿಗಾನ್, ಬರ್ಪೆಟಾ ಮತ್ತು ಬೊಂಗೈಗಾನ್ ಜಿಲ್ಲೆಯಲ್ಲಿ ನಿರ್ಮಿಸಲಾಗಿದ್ದ ಮದರಸಾಗಳನ್ನು ಅಲ್ಲಿನ ಆಡಳಿತವೇ ನೆಲಸಮ ಮಾಡಿತ್ತು. ನಿಯಮ ಉಲ್ಲಂಘಿಸಿ ಖಾಸಗಿ ಮದರಸಾ ನಿರ್ಮಿಸಲಾಗಿದೆ ಎಂದು ಪೊಲೀಸರು ಮತ್ತು ಸ್ಥಳೀಯಾಡಳಿತ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.