ADVERTISEMENT

Lok Sabha | ಮುಂಗಾರು ಅಧಿವೇಶನ ಮುಕ್ತಾಯ; ಅನಿರ್ದಿಷ್ಟಾವಧಿಗೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 11:42 IST
Last Updated 11 ಆಗಸ್ಟ್ 2023, 11:42 IST
ಸಂಸತ್ ಭವನ
ಸಂಸತ್ ಭವನ   

ನವದೆಹಲಿ: ಲೋಕಸಭೆ ಮುಂಗಾರು ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿದ್ದು, ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಈ ಅವಧಿಯಲ್ಲಿ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಹಾಗೂ ಆಡಳಿತ ಪಕ್ಷಗಳ ಸದಸ್ಯರ ನಡುವೆ ಭಾರಿ ಗದ್ದಲಕ್ಕೆ ಸಾಕ್ಷಿಯಾಯಿತು.

ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿಯಿಂದ ವಿಸ್ತೃತ ಹೇಳಿಕೆ ಬಯಸಿದ್ದ ವಿರೋಧ ಪಕ್ಷಗಳು, ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದವು.

ADVERTISEMENT

ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ 60 ಸಂಸದರು ಸುಮಾರು 20 ತಾಸು ಚರ್ಚೆ ನಡೆಸಿದ್ದರು. ಆದರೆ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಯಿತು.

ಗುರುವಾರದಂದು ಪ್ರಧಾನಿ ನರೇಂದ್ರ ಮೋದಿ ಭಾಷಣದ ಬಳಿಕ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಮತಕ್ಕೆ ಹಾಕಲಾಯಿತು.

ಈಶಾನ್ಯ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು. ಆದರೆ ಪ್ರಧಾನಿ ಹೇಳಿಕೆಯನ್ನು ಪ್ರತಿಭಟಿಸಿ ವಿಪಕ್ಷಗಳು ಸಭಾತ್ಯಾಗ ಮಾಡಿದ್ದವು.

17 ದಿನಗಳಲ್ಲಿ ನಾವು 44 ತಾಸು 13 ನಿಮಿಷಗಳ ಕಾಲ ಅಧಿವೇಶನ ನಡೆಸಿದ್ದೇವೆ ಎಂದು ಸ್ಪೀಕರ್ ಓಂ ಬಿರ್ಲಾ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ 20 ಮಸೂದೆಗಳನ್ನು ಪರಿಚಯಿಸಲಾಗಿದ್ದು, 22 ಕರಡು ಮಸೂದೆ ಅಂಗೀಕರಿಸಲಾಯಿತು ಎಂದು ಹೇಳಿದರು.

ಈ ಮೊದಲು ರಾಜ್ಯಸಭೆ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.