ಬೆಂಗಳೂರು: ಸಂಸತ್ ಭವನದಲ್ಲಿ ಮಹಿಳಾ ಸಂಸದರೊಂದಿಗೆ ಸೆಲ್ಫಿ ಪಡೆದುಕೊಂಡ ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುವಾಗ ನೀಡಿದ ವಿವರಣೆ ಟೀಕೆಗೆ ಗುರಿಯಾಗಿದೆ. ಹೀಗಾಗಿ ಅವರು ತಮ್ಮ ಟ್ವೀಟ್‌ಗೆ ಕ್ಷಮೆ ಕೇಳಿದ್ದಾರೆ.
ಸೋಮವಾರದಿಂದ ಸಂಸತ್ ಚಳಿಗಾಲದ ಆಧಿವೇಶನ ಆರಂಭವಾಗಿದೆ. ಸಂಸತ್ ಭವನದಲ್ಲಿ ಆರು ಮಂದಿ ಮಹಿಳಾ ಸಂಸದರೊಂದಿಗೆ ಸೆಲ್ಫಿ ತೆಗೆದುಕೊಂಡ ಶಶಿ ತರೂರ್ ಅವರು ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.
ಕೆಲಸ ಮಾಡಲು ಸಂಸತ್ತು ಆಕರ್ಷಕ ಸ್ಥಳವಲ್ಲ ಎಂದು ಹೇಳಿದವರು ಯಾರು? ಎಂದು ಬರೆದುಕೊಂಡಿದ್ದರು. ಸಂಸತ್‌ನ ಆರು ಮಂದಿ ಮಹಿಳಾ ಸದಸ್ಯರೊಂದಿಗೆ ಇಂದು ಬೆಳಗ್ಗೆ ತೆಗೆಸಿಕೊಂಡು ಚಿತ್ರವಿದು ಎಂದು ಅವರು ಚಿತ್ರದೊಂದಿಗೆ ವಿವರಣೆ ನೀಡಿದ್ದರು.
ಸಂಸದೆ ಸುಪ್ರಿಯಾ ಸುಳೆ, ಪ್ರನೀತ್ ಕೌರ್, ತಮಿಳ್ಸಾಚಿ, ಮಿಮಿ ಚಕ್ರವರ್ತಿ, ನುಸ್ರತ್ ಜಯಾನ್ ರೂಹಿ, ಜ್ಯೋತಿ ಮಣಿ ಇದ್ದ ಚಿತ್ರಕ್ಕೆ ತರೂರ್ ಅವರು ನೀಡಿದ ವಿವರಣೆಗೆ ಆಕ್ಷೇಪಗಳು ವ್ಯಕ್ತವಾದವು.
‘ಲೋಕಸಭೆಯಲ್ಲಿರುವ ಮಹಿಳೆಯರು ನಿಮ್ಮ ಕಾರ್ಯಕ್ಷೇತ್ರವನ್ನು ಆಕರ್ಷಕವಾಗಿಸುವ ಅಲಂಕಾರಿಕ ವಸ್ತುಗಳಲ್ಲ. ಅವರು ಸಂಸದರು. ನೀವು ಅಗೌರವ ತೋರಬಾರದು. ನೀವು ಲೈಂಗಿಕ ಅಭಿರುಚಿ ಹೊಂದಿದ್ದೀರಿ,’ ಎಂದು ಪತ್ರಕರ್ತೆ ವಿದ್ಯಾ ಎಂಬುವವರು ತರೂರ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದರು.
‘ಮಹಿಳೆಯರಿಂದ ಮಾತ್ರವೇ ನೀವು ಆಕರ್ಷಣೆಗೆ ಒಳಗಾಗುತ್ತೀರಾ? ನಿಮ್ಮ ಕಾರ್ಯ ಸ್ಥಳವನ್ನು ಆಕರ್ಷಕಗೊಳಿಸಲು ನಿಮ್ಮ ಜವಾಬ್ದಾರಿ ನಿಮ್ಮ ಕ್ಷೇತ್ರದ ಕಡೆಗಿರಬೇಕು ಎಂದು ನಿಮಗೆ ಅನಿಸುವುದಿಲ್ಲವೇ?’ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಮ್ಮ ಟ್ವೀಟ್ ಟೀಕೆಗೆ ಒಳಗಾಗುತ್ತಿದೆ ಎಂಬುದು ಅರಿಯುತ್ತಲೇ, ಎಚ್ಚೆತ್ತುಕೊಂಡಿರುವ ಸಂಸದ ಶಶಿ ತರೂರ್ ಕ್ಷಮೆ ಕೋರಿದ್ದಾರೆ.
ಈ ಸೆಲ್ಫಿ ನಡೆದಿದ್ದು ಒಂದೊಳ್ಳೆ ಭಾವನೆಯಲ್ಲಿ. ಅದೂ ಮಹಿಳಾ ಸಂಸದರ ಇಚ್ಛೆಯೊಂದಿಗೆ. ಅವರ ಹೇಳಿದಂತೆಯೇ ನಾನು ಫೋಟೊವನ್ನು ಟ್ವಿಟರ್‌ಗೆ ಹಾಕಿದೆ. ಇದರಿಂದ ಕೆಲ ಮಂದಿ ಮನನೊಂದಿದ್ದಾರೆ. ಅದಕ್ಕಾಗಿ ಕ್ಷಮೆ ಕೋರುತ್ತೇನೆ. ನಮ್ಮ ಕೆಲಸದ ಸ್ಥಳ ಸೌಹಾರ್ದದಿಂದ ಕೂಡಿದೆ ಎಂಬುದನ್ನು ಬಿಂಬಿಸುವ ಈ ಚಿತ್ರದಲ್ಲಿ ನಾನೂ ಸೇರಿದ್ದಕ್ಕೆ ನನಗೆ ಖುಷಿಯಿದೆ. ಅಷ್ಟೆ,’ ಎಂದು ಶಶಿ ತರೂರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.