ನವದೆಹಲಿ: ಸಂಸತ್‌ನ ಕೆಳಮನೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ನಡೆಯುತ್ತಿದ್ದ ವೇಳೆ ಸಂಸತ್ ಟಿ.ವಿಯಲ್ಲಿ ಬಿತ್ತರಗೊಂಡ ಪ್ರಧಾನಿ ಮೋದಿ ಸರ್ಕಾರದ ಸಾಧನೆಗಳ ವಿರುದ್ಧ ವಿರೋಧ ಪಕ್ಷದ ಸದಸ್ಯರ ಕೆಂಡಾಮಂಡಲವಾದರು.
ಅಭಿವೃದ್ಧಿ ಕಾರ್ಯಕ್ರಮಗಳ ಪ್ರಸಾರಕ್ಕೆ ತೀವ್ರ ಆಕ್ಷೇಪವ್ಯಕ್ತಪಡಿಸಿದ ಸದಸ್ಯರು, ಸ್ಪೀಕರ್ ಪೀಠದ ಮುಂದೆ ಧಾವಿಸಿ ಪ್ರತಿಭಟನೆಗೂ ಮುಂದಾದರು. ಇದರಿಂದ ಕೆಲಕಾಲ ಕಲಾಪಕ್ಕೆ ಅಡ್ಡಿಯಾಯಿತು.
ಬಳಿಕ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮಾತನಾಡಲು ಮುಂದಾದಾಗ ಕಾಂಗ್ರೆಸ್, ಟಿಎಂಸಿ ಹಾಗೂ ಡಿಎಂಕೆ ಸದಸ್ಯರಿಂದ ವಿರೋಧ ವ್ಯಕ್ತವಾಯಿತು. ಆಗ ಸದನದಲ್ಲಿ ಹಾಜರಿದ್ದ ಕೆಲವು ಸಚಿವರು, ‘ಪ್ರತಿಪಕ್ಷಗಳಿಗೆ ಸರ್ಕಾರದ ಸಾಧನೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ’ ಎಂದು ತಮ್ಮ ಹರಿತ ಮಾತುಗಳಿಂದ ತಿವಿದರು.
ಕೊನೆಗೆ, ಸ್ಪೀಕರ್ ಓಂ ಬಿರ್ಲಾ ಅವರು, ಕೋಪೋದ್ರಿಕ್ತ ವಿರೋಧ ಪಕ್ಷದ ಸದಸ್ಯರನ್ನು ಸಮಾಧಾನಪಡಿಸಿದರು. ಬಿರ್ಲಾ ಅವರ ಸೂಚನೆಯ ಬಳಿಕ ಟಿ.ವಿ ಪರದೆಯಲ್ಲಿ ಸರ್ಕಾರಿ ಕಾರ್ಯಕ್ರಮಗಳ ಪ್ರಚಾರಕ್ಕೆ ತಡೆಬಿದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.