ADVERTISEMENT

ಡಿಜಿಟಲ್‌ ದತ್ತಾಂಶ ಸಂರಕ್ಷಣಾ ಮಸೂದೆ: ಲೋಕಸಭೆ ಅನುಮೋದನೆ

ಪಿಟಿಐ
Published 7 ಆಗಸ್ಟ್ 2023, 15:55 IST
Last Updated 7 ಆಗಸ್ಟ್ 2023, 15:55 IST
   

ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಡಿಜಿಟಲ್‌ ದತ್ತಾಂಶ ಸಂರಕ್ಷಣಾ ಮಸೂದೆಗೆ ಲೋಕಸಭೆಯಲ್ಲಿ ಸೋಮವಾರ ಧ್ವನಿ ಮತದ ಅಂಗೀಕಾರ ದೊರೆಯಿತು. ವಿರೋಧ ಪಕ್ಷಗಳ ಸದಸ್ಯರು ಪ್ರಸ್ತಾಪಿಸಿದ್ದ ತಿದ್ದುಪಡಿಗೆ ಸೋಲಾಯಿತು. 

ನಾಗರಿಕ ಕಲ್ಯಾಣ ಮತ್ತು ಜನರ ವೈಯಕ್ತಿಕ ಮಾಹಿತಿ ಸಂರಕ್ಷಣೆಯಂಥ ವಿಷಯಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಸದಸ್ಯರಿಗೆ ಸ್ವಲ್ಪ ಮಟ್ಟಿಗೆ ಆತಂಕವಿದೆ. ಆದ್ದರಿಂದ ಅವರು ಘೋಷಣೆ ಕೂಗುತ್ತಿದ್ದಾರೆ ಎಂದು ಮಸೂದೆ ಮಂಡನೆ ವೇಳೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದರು. ಜತೆಗೆ, ಮಸೂದೆಗೆ ಸರ್ವಾನುಮತದ ಅನುಮೋದನೆ ನೀಡಬೇಕೆಂದು ಕೋರಿದರು. 

ಭಾರತೀಯ ನಾಗರಿಕರ ಖಾಸಗಿತನ ಕಾಪಾಡುವುದು ಈ ಮಸೂದೆಯ ಮುಖ್ಯ ಉದ್ದೇಶ. ಜನರ ಡಿಜಿಟಲ್ ದತ್ತಾಂಶ ದುರುಪಯೋಗಪಡಿಸಿಕೊಳ್ಳುವ ಅಥವಾ ದತ್ತಾಂಶ ರಕ್ಷಿಸದ ಸಂಸ್ಥೆಗಳಿಗೆ ₹250 ಕೋಟಿ ದಂಡ ವಿಧಿಸುವ ಪ್ರಸ್ತಾವವನ್ನೂ ಮಸೂದೆ ಹೊಂದಿದೆ. 

ADVERTISEMENT

ಖಾಸಗಿತನವು ಜನರ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಘೋಷಿಸಿ ಆರು ವರ್ಷಗಳ ಬಳಿಕ ಈ ಮಸೂದೆ ಮಂಡನೆಯಾಗಿದೆ. ಆನ್‌ಲೈನ್‌ನಲ್ಲಿ ಜನರ ದತ್ತಾಂಶ ದುರುಪಯೋಗವಾಗುವುದನ್ನು ತಡೆಯುವ ನಿಬಂಧನೆಗಳನ್ನು ಈ ಮಸೂದೆ ಒಳಗೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.