ಪಟ್ನಾ: 2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ಅಧಿಸೂಚನೆ ಸೋಮವಾರ ಪ್ರಕಟವಾಗಲಿದೆ. ಆದರೆ, ಭಾರಿ ಚರ್ಚೆಗೆ ಒಳಗಾದ ಬಿಹಾರದ ಮಹಾಮೈತ್ರಿಕೂಟ ಸ್ಪಷ್ಟರೂಪ ಪಡೆದುಕೊಳ್ಳುವ ಯಾವ ಲಕ್ಷಣವೂ ಭಾನುವಾರದ ವರೆಗೆ ಕಂಡು ಬಂದಿಲ್ಲ. ಸಮಾನ ವೈರಿ ಎನ್‌ಡಿಎ ಮೈತ್ರಿಕೂಟದ ವಿರುದ್ಧ ಸಂಘಟಿತವಾಗುವ ಬದಲು ಮಹಾಮೈತ್ರಿಕೂಟದ ಪಕ್ಷಗಳು ಪರಸ್ಪರರ ವಿರುದ್ಧವೇ ತೊಡೆ ತಟ್ಟುತ್ತಿವೆ.
ಬಿಹಾರದ 40 ಕ್ಷೇತ್ರಗಳಿಗೆ ಮಹಾಮೈತ್ರಿಕೂಟದ ಸೀಟು ಹಂಚಿಕೆ ಭಾನುವಾರ ಪ್ರಕಟವಾಗಬೇಕಿತ್ತು. ಆದರೆ, ಸೀಟು ಹಂಚಿಕೆಯನ್ನು ಪ್ರಕಟಿಸಲು ಕರೆಯಲಾಗಿದ್ದ ಮಾಧ್ಯಮಗೋಷ್ಠಿ ಕೊನೆಯ ಕ್ಷಣದಲ್ಲಿ ರದ್ದಾಯಿತು. ಮಹಾಮೈತ್ರಿಕೂಟದ ಪ್ರಮುಖ ಪಕ್ಷ ಆರ್‌ಜೆಡಿಯ ಮುಖಂಡ ತೇಜಸ್ವಿ ಯಾದವ್ ಅವರು ಕಾಂಗ್ರೆಸ್ ಪಕ್ಷವು ಸಣ್ಣ ಪಕ್ಷಗಳಿಗೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧವಿಲ್ಲ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದು ಕೊನೆಯ ಕ್ಷಣದಲ್ಲಿ ಮಾಧ್ಯಮಗೋಷ್ಠಿ ರದ್ದಾಗಲು ಕಾರಣ ಎನ್ನಲಾಗಿದೆ.
‘ಸೀಟು ಹಂಚಿಕೆ ಮಾತುಕತೆ ಯಾವ ರೀತಿಯ ಬಿಕ್ಕಟ್ಟಿಗೆ ತಲುಪಿದೆ ಎಂದರೆ, ಮೈತ್ರಿ ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣ ಆಗಿದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ತಿಕ್ಕಾಟಕ್ಕೆ ಕಾರಣ: ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರಗಳನ್ನು ಕೊಡಬೇಕು ಎಂಬುದು ಆರ್‌ಜೆಡಿ ಮತ್ತು ಕಾಂಗ್ರೆಸ್ ನಡುವಣ ಭಿನ್ನಾಭಿಪ್ರಾಯಕ್ಕೆ ಕಾರಣ. ಇದು ಲೋಕಸಭಾ ಚುನಾವಣೆ ಆಗಿರುವುದರಿಂದ ತನ್ನ ಮಾತಿಗೆ ಹೆಚ್ಚು ಬೆಲೆ ಇರಬೇಕು. ಕನಿಷ್ಠ 15 ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬುದು ಕಾಂಗ್ರೆಸ್‌ನ ವಾದ. ಆದರೆ, ಬಿಹಾರದಲ್ಲಿ ಕಾಂಗ್ರೆಸ್‌ಗೆ ನೆಲೆಯೇ ಇಲ್ಲ. ಹಾಗಾಗಿ, ಬೇರೆ ಪಕ್ಷಗಳಿಂದ ವಲಸೆ ಬಂದವರಿಗೆ ಕಾಂಗ್ರೆಸ್ ಟಿಕೆಟ್ ಕೊಡುವ ಬದಲಿಗೆ ಸಣ್ಣ ಪಕ್ಷಗಳಿಗೆ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬುದು ಆರ್‌ಜೆಡಿ ಪ್ರತಿಪಾದನೆ.
ಮಹಾಮೈತ್ರಿಯ ಅಂಗಪಕ್ಷಗಳು ಕಿತ್ತಾಡುತ್ತಿರುವುದು ಮತದಾರರಿಗೆ ತಪ್ಪು ಸಂದೇಶ ನೀಡುತ್ತದೆ. ಕ್ರಮೇಣ ಇದು ಮಹಾಮೈತ್ರಿಗೆ ಭಾರಿ ದುಬಾರಿಯಾಗಬಹುದು. ಮಹಾಮೈತ್ರಿಯ ಮುಖಂಡರು ಗೆದ್ದ ಮೇಲೆ ಏನಾಗಬಹುದು ಎಂಬುದರ ಸುಳಿವನ್ನು ಈಗಿನ ಸಂಘರ್ಷ ನೀಡುತ್ತದೆ’ ಎಂದು ರಾಜಕೀಯ ವಿಶ್ಲೇಷಕ ಅಜಯ್ ಕುಮಾರ್ ಹೇಳುತ್ತಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರ ಭೇಟಿಯು ಎಲ್ಲ ಗೊಂದಲಗಳನ್ನು ಪರಿಹರಿಸಲಿದೆ ಎಂಬ ನಿರೀಕ್ಷೆ ಎರಡೂ ಪಕ್ಷಗಳಲ್ಲಿ ಇದೆ.
ಹಾಗಾದರೆ, ಮಹಾಮೈತ್ರಿಯ ಸೀಟು ಹಂಚಿಕೆ ಸೋಮವಾರ ಪ್ರಕಟವಾಗಬಹುದು.
ಎನ್‌ಡಿಎ ಪಟ್ಟಿಯೂ ವಿಳಂಬ
ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಪಕ್ಷಗಳಾದ ಬಿಜೆಪಿ, ಜೆಡಿಯು ಮತ್ತು ಎಲ್‌ಜೆಪಿ ನಡುವಣ ಸೀಟು ಹಂಚಿಕೆ ಅಂತಿಮಗೊಂಡಿದೆ. ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದರೂ ಕೊನೆ ಕ್ಷಣದಲ್ಲಿ ಅದನ್ನು ತಡೆ ಹಿಡಿಯಲಾಗಿದೆ.
ಬಿಜೆಪಿ ಮತ್ತು ಜೆಡಿಯು ತಲಾ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಆರು ಕ್ಷೇತ್ರಗಳನ್ನು ಎಲ್‌ಜೆಪಿಗೆ ಬಿಟ್ಟು ಕೊಡಲಾಗಿದೆ.
ಬಿಜೆಪಿ ನಾಯಕತ್ವದ ವಿರುದ್ಧ ಬಂಡಾಯ ಸಾರಿರುವ ಶತ್ರುಘ್ನ ಸಿನ್ಹಾ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಅವರ ವಿರುದ್ಧ ಪಟ್ನಾ ಸಾಹಿಬ್ ಕ್ಷೇತ್ರದಿಂದ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಗೊಂದಲವೇ ಪಟ್ಟಿ ಬಿಡುಗಡೆ ತಡೆ ಹಿಡಿಯಲು ಕಾರಣ ಎನ್ನಲಾಗಿದೆ. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅಥವಾ ಆರ್. ಕೆ. ಸಿನ್ಹಾ ಅವರಲ್ಲಿ ಒಬ್ಬರು ಕಣಕ್ಕೆ ಇಳಿಯುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.