ADVERTISEMENT

ಉಪ ಚುನಾವಣೆ ಸ್ಪರ್ಧೆಗೆ ಪಕ್ಷ ಸಿದ್ಧ

64ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಕಮಲ್ ಹಾಸನ್

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 19:52 IST
Last Updated 7 ನವೆಂಬರ್ 2018, 19:52 IST
ಕಮಲ್ ಹಾಸನ್
ಕಮಲ್ ಹಾಸನ್   

ಚೆನ್ನೈ: ‘ತಮಿಳುನಾಡಿನ 20 ವಿಧಾನಸಭೆ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಮಕ್ಕಳ್‌ ನೀದಿ ಮೈಯಂ (ಎಂಎನ್‌ಎಂ) ಪಕ್ಷ ಸ್ಪರ್ಧಿಸಲು ಸಿದ್ಧವಿದೆ’ ಎಂದು ಪಕ್ಷದ ಸ್ಥಾಪಕ ಹಾಗೂ ನಟ ಕಮಲ್‌ ಹಾಸನ್‌ ಹೇಳಿದ್ದಾರೆ.

ಹಾಸನ್‌ ಅವರು ತಮ್ಮ 64ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಮಾತನಾಡಿ, ‘ಈ ಮೊದಲು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಲಾಗಿತ್ತು. ಆ ಸಂದರ್ಭದಲ್ಲಿ ಡಿಎಂಕೆ ನಾಯಕ ಎಂ.ಕರುಣಾನಿಧಿ ಹಾಗೂ ಎಐಎಡಿಎಂಕೆಯ ಎ.ಕೆ.ಬೋಸ್‌ ಅವರ ನಿಧನದಿಂದ ಎರಡು ಕ್ಷೇತ್ರಗಳಲ್ಲಿ ಮಾತ್ರ ಉಪಚುನಾವಣೆ ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗ 20 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದರೆ, ನಮ್ಮ ಪಕ್ಷವೂ ಸ್ಪರ್ಧಿಸಲಿದೆ’ ಎಂದರು.

‘ಉಪಚುನಾವಣೆ ಯಾವಾಗ ನಡೆಯಬಹುದು ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆದರೆ, ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಾವು ಸಿದ್ಧರಾಗಿದ್ದೇವೆ’ ಎಂದು ಬುಧವಾರ ಅವರು ತಿಳಿಸಿದ್ದಾರೆ. ಜೆ.ಜಯಲಲಿತಾ ಅವರ ನಿಧನದಿಂದ ತೆರವಾಗಿದ್ದ ಚೆನ್ನೈನ ಆರ್‌.ಕೆ.ನಗರ ಕ್ಷೇತ್ರದಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಉಪಚುನಾವಣೆ ನಡೆದಿತ್ತು. ವಿ.ಕೆ.ಶಶಿಕಲಾ ಸೋದರ ಸಂಬಂಧಿ ಟಿ.ಟಿ.ವಿ.ದಿನಕರನ್‌ ಅವರು ಈ ಕ್ಷೇತ್ರದಲ್ಲಿ ಜಯಗಳಿಸಿದ್ದರು. ನಂತರ ರಾಜ್ಯದಲ್ಲಿ ಯಾವುದೇ ಉಪಚುನಾವಣೆ ನಡೆದಿಲ್ಲ.

ADVERTISEMENT

ಆಡಳಿತಾರೂಢ ಪಕ್ಷದ ವಿರುದ್ಧವೇ ಬಂಡಾಯವೆದ್ದು, ಎಎಂಎಂಕೆ ಮುಖಂಡ ಟಿ.ಟಿ.ವಿ.ದಿನಕರನ್‌ಗೆ ನಿಷ್ಠೆ ತೋರಿದ್ದ ಎಐಎಡಿಎಂಕೆಯ 18 ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿತ್ತು. ಈಶಾಸಕರನ್ನು ಅನರ್ಹಗೊಳಿಸಿದ್ದನ್ನು ಮದ್ರಾಸ್‌ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಆದ್ದರಿಂದ ಈಗ ಉಪಚುನಾವಣೆ ಅನಿವಾರ್ಯವಾಗಿದೆ.

ಈ 18 ಕ್ಷೇತ್ರಗಳ ಜೊತೆಗೆ ಕರುಣಾನಿಧಿ ಅವರ ನಿಧನದಿಂದ ತೆರವಾದ ತಿರುವರೂರ್‌ ಮತ್ತು ಬೋಸ್‌ ಅವರು ಪ್ರತಿನಿಧಿಸಿದ್ದತಿರುಪರಾಂಕುಂದ್ರಮ್ ಕ್ಷೇತ್ರಗಳಿಗೂ ಉಪಚುನಾವಣೆ ನಡೆಯಲಿದೆ. ಚುನಾವಣಾ ಆಯೋಗವು ಉಪ ಚುನಾವಣೆಗೆ ಅಧಿಸೂಚನೆ ಹೊರಡಿಸುವುದು ಬಾಕಿಯಿದೆ. ಎಐಎಡಿಎಂಕೆಯ ಇ.ಪಳನಿಸ್ವಾಮಿ ನೇತೃತ್ವದ ಸರ್ಕಾರಕ್ಕೆ ಇದು ಪರೀಕ್ಷೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

18 ಶಾಸಕರ ಸದಸ್ಯತ್ವ ಅನರ್ಹಗೊಂಡ ನಂತರ, 234 ಶಾಸಕರ ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆ ಶಾಸಕರ ಸಂಖ್ಯೆ 116ಕ್ಕೆ ಇಳಿದಿದೆ. ಡಿಎಂಕೆ ಮೈತ್ರಿಕೂಟ 97 ಶಾಸಕರ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.