ನವದೆಹಲಿ: ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮತಗಟ್ಟೆ ವಶಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ 925 ದೂರುಗಳು ಬಂದಿದ್ದು, ಅವುಗಳಲ್ಲಿ ಮೂರು ದೂರುಗಳು ಮಾತ್ರ ನಿಜವಾದುದು ಎಂದು ಸರ್ಕಾರ, ಗುರುವಾರ ರಾಜ್ಯಸಭೆಗೆ ತಿಳಿಸಿದೆ.
ಲೋಕಸಭೆ ಚುನಾವಣೆ ವೇಳೆ ಮತಗಟ್ಟೆ ವಶ ಘಟನೆಗೆ ಸಂಬಂಧಿಸಿದಂತೆ ಒಡಿಶಾದಲ್ಲಿ 12 ಮತ್ತು ಅರುಣಾಚಲ ಪ್ರದೇಶದಲ್ಲಿ ಇಬ್ಬರು ಸೇರಿದಂತೆ ಒಟ್ಟು 14 ಮಂದಿಯನ್ನು ಬಂಧಿಸಲಾಗಿದೆ ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಾಹಿತಿ ನೀಡಿದರು.
ಕಳೆದ ಐದು ವರ್ಷಗಳಲ್ಲಿ ನಡೆದ ಮತಗಟ್ಟೆ ವಶ ಘಟನೆಗಳ ಕುರಿತು ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಕೇಳಿದ ಪ್ರಶ್ನೆಗೆ ಮೇಘವಾಲ್ ಲಿಖಿತ ಉತ್ತರ ನೀಡಿದರು.
ಈಚೆಗೆ ನಡೆದ ಲೋಕಸಭಾ ಚುನಾವಣೆಗೆ ಸಂಬಂಧಿಸಿದ 925 ದೂರುಗಳು ಒಳಗೊಂಡಂತೆ ಕಳೆದ ಐದು ವರ್ಷಗಳಲ್ಲಿ ಮತಗಟ್ಟೆ ವಶ ಘಟನೆಯ ಒಟ್ಟು 988 ದೂರುಗಳು ಬಂದಿವೆ. 2019ರ ಲೋಕಸಭೆ ಚುನಾವಣೆ ಮತ್ತು 2020ರ ಬಿಹಾರ ವಿಧಾನಸಭಾ ಚುನಾವಣೆ ವೇಳೆ ಇಂತಹ 50 ದೂರುಗಳು ಬಂದಿದ್ದವು. ಆದರೆ ಅವುಗಳಲ್ಲಿ ಯಾವುವೂ ನೈಜ ಎಂಬುದಾಗಿ ಕಂಡುಬಂದಿಲ್ಲ.
‘2024ರ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 875 ದೂರುಗಳು ದಾಖಲಾಗಿದ್ದವು. ಯಾವುದೇ ಪ್ರಕರಣವನ್ನು ರುಜುವಾತುಪಡಿಸಲು ಸಾಧ್ಯವಾಗದ ಕಾರಣ ಸಂಬಂಧಿತ ಜಿಲ್ಲಾ ಚುನಾವಣಾಧಿಕಾರಿ/ ಎಸ್‌ಪಿ/ ಪೊಲೀಸ್ ಆಯುಕ್ತರ ವರದಿಯನ್ನಾಧರಿಸಿ ದೂರುಗಳನ್ನು ವಿಲೇವಾರಿ ಮಾಡಲಾಗಿದೆ’ ಎಂದು ಚುನಾವಣಾ ಆಯೋಗವನ್ನು ಉಲ್ಲೇಖಿಸಿ ಮೇಘವಾಲ್ ತಿಳಿಸಿದರು.
ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಚುನಾವಣಾ ಅಕ್ರಮ ನಡೆಸಿದೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಆರೋಪಿಸಿದ್ದವು. ಮತ್ತೊಂದೆಡೆ, ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಯು ಅಕ್ರಮ ನಡೆಸಿದೆ ಎಂದು ಟಿಎಂಸಿ ಆರೋಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.