ನವದೆಹಲಿ: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ನಾಯಕರನ್ನಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಿತ್ರ ಪಕ್ಷದ ನಾಯಕರು ಅವಿರೋಧವಾಗಿ ಬುಧವಾರ ಆಯ್ಕೆ ಮಾಡಿದ್ದಾರೆ. ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಮೋದಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೂನ್ 8ರಂದು ಪ್ರಮಾಣವಚನ ಸಮಾರಂಭ ನಡೆಯುವ ಸಂಭವ ಇದೆ.
ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಸರಳ ಬಹುಮತಕ್ಕೆ ಬೇಕಿರುವ ಸ್ಥಾನಗಳನ್ನು ಗೆದ್ದ ಒಂದು ದಿನದ ನಂತರ ದೋಸ್ತಿ ನಾಯಕರು ಪ್ರಧಾನಿ ನಿವಾಸದಲ್ಲಿ ಸಭೆ ನಡೆಸಿ ನೂತನ ಸರ್ಕಾರದ ರಚನೆಯ ಕುರಿತು ಮಂತ್ರಾಲೋಚನೆ ನಡೆಸಿದರು. ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಹಿರಿಯ ನಾಯಕರಾದ ರಾಜನಾಥ ಸಿಂಗ್, ಅಮಿತ್ ಶಾ, ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿವಸೇನಾದ ಏಕನಾಥ ಶಿಂದೆ, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ, ಲೋಕಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಸೇರಿದಂತೆ 16 ಪಕ್ಷಗಳ 21 ನಾಯಕರು ಸಭೆಯಲ್ಲಿ ಭಾಗಿಯಾದರು.
ಪ್ರಧಾನಿ ಹುದ್ದೆಗೆ ಮೋದಿ ಹೆಸರನ್ನು ರಾಜನಾಥ್ ಸಿಂಗ್ ಪ್ರಸ್ತಾಪಿಸಿದರು. ಈ ಪ್ರಸ್ತಾವವನ್ನು ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಏಕನಾಥ ಶಿಂದೆ ಸೇರಿದಂತೆ ಮಿತ್ರ ಪಕ್ಷಗಳ ನಾಯಕರು ಅನುಮೋದಿಸಿದರು. ಮೋದಿ ಅವರು ಆದಷ್ಟು ಬೇಗ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಬೇಕು ಎಂದು ನಾಯಕರು ಸಲಹೆ ನೀಡಿದರು. ಮೈತ್ರಿ ಸರ್ಕಾರಕ್ಕೆ ಯಾವುದೇ ಷರತ್ತು ಇಲ್ಲದೆ ಬೆಂಬಲ ನೀಡುವ ಪತ್ರವನ್ನು ಮಿತ್ರಪಕ್ಷಗಳ ನಾಯಕರು ನೀಡಿದರು.
ಜವಾಹರಲಾಲ್ ನೆಹರೂ ಅವರು ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಗೆದ್ದು ಪ್ರಧಾನಿಯಾಗಿ ದಾಖಲೆ ಬರೆದಿದ್ದರು. ಇದೀಗ, ನೆಹರೂ ‘ಹ್ಯಾಟ್ರಿಕ್’ ಸಾಧನೆಯನ್ನು ಮೋದಿ ಸರಿಗಟ್ಟಲಿದ್ದಾರೆ. ಮೈತ್ರಿಕೂಟದ ಸಂಚಾಲಕರಾಗಿ ಚಂದ್ರಬಾಬು ನಾಯ್ದು ಆಯ್ಕೆಯಾಗುವ ಸಾಧ್ಯತೆ ಇದೆ. ಮೈತ್ರಿ ಸರ್ಕಾರದ ಸುಸೂತ್ರ ಕಾರ್ಯನಿರ್ವಹಣೆಗೆ ಸಮನ್ವಯ ಸಮಿತಿ ರಚಿಸುವ ಕುರಿತು ಚರ್ಚೆಗಳು ನಡೆದಿವೆ.
ಮೋದಿ ಅವರನ್ನು ತಮ್ಮ ನಾಯಕರನ್ನಾಗಿ ಔಪಚಾರಿಕವಾಗಿ ಆಯ್ಕೆ ಮಾಡಲು ಎನ್‌ಡಿಎ ಸಂಸದರು ಜೂನ್ 7 ರಂದು ಸಭೆ ನಡೆಸಲಿದ್ದಾರೆ. ಬಳಿಕ ಮೈತ್ರಿ ನಾಯಕರು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಬೆಂಬಲ ಪತ್ರ ನೀಡಲಿದ್ದಾರೆ ಎಂದು ಎಚ್‌ಎಂ (ಎಸ್) ನಾಯಕ ಜಿತನ್ ರಾಮ್ ಮಾಂಝಿ ಅವರು ಸುದ್ದಿಗಾರರಿಗೆ ತಿಳಿಸಿದರು. ಜೂನ್ 8ರಂದು ರಾತ್ರಿ 8 ಗಂಟೆಗೆ ಮೋದಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 17ನೇ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೆ ಮುನ್ನ ನೂತನ ಸರ್ಕಾರ ರಚನೆಯಾಗಬೇಕಿದೆ.
‘ಎನ್‌ಡಿಎ ಸರ್ಕಾರವು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಜನರ ಗುಣಮಟ್ಟವನ್ನು ಸುಧಾರಿಸುವ ಕೆಲಸವನ್ನು ಮುಂದುವರಿಸಲಿದೆ. ಬಡವರು, ಯುವಕರು, ರೈತರು ಹಾಗೂ ಸಮಾಜದ ವಂಚಿತ ವರ್ಗದ ಸೇವೆ ಮಾಡಲು ಮೈತ್ರಿಕೂಟ ಕಟಿಬದ್ಧವಾಗಿದೆ’ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
‘2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಒಗ್ಗಟ್ಟಿನಿಂದ ಹೋರಾಡಿ ಗೆದ್ದಿದ್ದಕ್ಕೆ ನಾವೆಲ್ಲರೂ ಹೆಮ್ಮೆಪಡುತ್ತೇವೆ. ನಾವೆಲ್ಲರೂ ಎನ್‌ಡಿಎ ನಾಯಕರು ನರೇಂದ್ರ ಮೋದಿಯನ್ನು ನಮ್ಮ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡುತ್ತೇವೆ’ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
‘ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಜನಪರ ನೀತಿಗಳಿಂದಾಗಿ ಕಳೆದ 10 ವರ್ಷಗಳಲ್ಲಿ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯಾಗುತ್ತಿರುವುದನ್ನು ಜನರು ನೋಡಿದ್ದಾರೆ’ ಎಂದು ನಿರ್ಣಯ ಹೇಳಿದೆ.
’ಕಳೆದ 10 ವರ್ಷಗಳಲ್ಲಿ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳು ನಡೆದಿವೆ. ಮುಂದಿನ ದಿನಗಳಲ್ಲಿ ಹೊಸ ಶಕ್ತಿ ಹಾಗೂ ಆವೇಗದೊಂದಿಗೆ ರಾಷ್ಟ್ರ ಹಾಗೂ ಜನರ ಸೇವೆ ಸಲ್ಲಿಸಲು ಮಿತ್ರಕೂಟ ಬದ್ಧವಾಗಿದೆ’ ಎಂದು ಅಮಿತ್ ಶಾ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಎನ್‌ಡಿಎ ಸಭೆಯಲ್ಲಿ ಭಾಗಿಯಾಗಲು ನವದೆಹಲಿಗೆ ಧಾವಿಸಿದ ಮಿತ್ರ ಪಕ್ಷಗಳ ನಾಯಕರು
ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟದ ಸಭೆ. 17ನೇ ಲೋಕಸಭೆಯ ವಿಸರ್ಜನೆಗೆ ಸಂಪುಟ ಶಿಫಾರಸು
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಪ್ರಧಾನಿ ಸ್ಥಾನಕ್ಕೆ ಮೋದಿ ರಾಜೀನಾಮೆ. ಮೋದಿ ಹಾಗೂ ಸಂಪುಟ ಸದಸ್ಯರ ರಾಜೀನಾಮೆ ಅಂಗೀಕಾರ
ಹೊಸ ಸರ್ಕಾರ ರಚನೆಯಾಗುವ ತನಕ ಹುದ್ದೆಯಲ್ಲಿ ಮುಂದುವರಿಯುವಂತೆ ಮುರ್ಮು ಸಲಹೆ
ಪ್ರಧಾನಿ ನಿವಾಸದಲ್ಲಿ ಎನ್‌ಡಿಎ ಮೈತ್ರಿಕೂಟದ ನಾಯಕರ ಸಭೆ. ಮೈತ್ರಿಕೂಟದ ನಾಯಕರಾಗಿ ಮೋದಿ ಆಯ್ಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.