ADVERTISEMENT

ಒಂಬತ್ತು ರಾಜ್ಯಗಳಲ್ಲಿ 4ನೇ ಹಂತದ ಮತದಾನ ಆರಂಭ: ಬೆಳಗಿನಿಂದಲೇ ಸೆಲೆಬ್ರಿಟಿಗಳ ಸಾಲು

ಲೋಕಸಭಾ ಚುನಾವಣೆ

ಏಜೆನ್ಸೀಸ್
Published 29 ಏಪ್ರಿಲ್ 2019, 8:52 IST
Last Updated 29 ಏಪ್ರಿಲ್ 2019, 8:52 IST
   

ನವದೆಹಲಿ: ಒಂಬತ್ತು ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಿಗೆ ಸೋಮವಾರ ಮತದಾನ ಆರಂಭಗೊಂಡಿದೆ. ಅತ್ಯಂತ ಕುತೂಹಲ ಕೆರಳಿಸಿರುವ ಬಿಹಾರದ ಬೇಗುಸರಾಯ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿ ನಂತರ ಮತಚಲಾಯಿಸಿದರು.

ವಿದ್ಯಾರ್ಥಿ ನಾಯಕನಾಗಿ ದೇಶದೆಲ್ಲೆಡೆ ಗುರುತಿಸಿಕೊಂಡ ಕನ್ಹಯ್ಯಾ ಕುಮಾರ್‌ ಸಿಪಿಐ ಅಭ್ಯರ್ಥಿಯಾಗಿ ಬೇಗುಸರಾಯ್‌ ಕ್ಷೇತ್ರದಿಂದ ಕಣಕ್ಕಿಳಿದಿರುವುದರಿಂದ ಈ ಕ್ಷೇತ್ರ ಹೆಚ್ಚಿನ ಗಮನ ಸೆಳೆದಿದೆ.ಕನ್ಹಯ್ಯಾ ಮತ್ತು ಗಿರಿರಾಜ್‌ ಇಬ್ಬರೂ ಪ್ರಭಾವಿ ಭೂಮಿಹಾರ್ ಸಮುದಾಯದವರಾಗಿದ್ದಾರೆ. ಕನ್ಹಯ್ಯಾ ಸ್ಥಳೀಯನಾಗಿದ್ದು, ಗಿರಿರಾಜ್‌ ನವಾದಾ ಕ್ಷೇತ್ರದಿಂದ ವಲಸೆ ಬಂದವರಾಗಿದ್ದಾರೆ. ಈ ಎಲ್ಲ ಕಾರಣಗಳಿಂದ ಇಬ್ಬರ ನಡುವೆ ಪೈಪೋಟಿ ಹೆಚ್ಚಿದೆ.ಆರ್‌ಜೆಡಿಯ ತನ್ವೀರ್‌ ಹಸನ್‌ ಸಹ ಪ್ರಬಲ ಸ್ಪರ್ಧೆ ನೀಡಿದ್ದಾರೆ.

ಲಖಿಸರಾಯ್‌ ಜಿಲ್ಲೆಯ ಬಡಹಿಯಾದ ಮತಗಟ್ಟೆ ಸಂಖ್ಯೆ 33ರಲ್ಲಿ ಕೇಂದ್ರ ಸಚಿವ ಗಿರಿರಾಜ್‌ ಮತದಾನ ಮಾಡಿದರು. ಇದಕ್ಕೂ ಮುನ್ನ ಬಡಹಿಯಾದ ಶಾಕಿತ್‌ಧಾಮದಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದರು.

ಉತ್ತರ ಪ್ರದೇಶದ ಕನೌಜ್‌ ಮತಕೇಂದ್ರದಲ್ಲಿ ಬೆಳಗ್ಗಿನಿಂದಲೇ ಮತದಾರರು ಸಾಲುಗಟ್ಟಿದ್ದಾರೆ. ಮುಂಬೈನ ಹಲವು ಮತಗಟ್ಟೆಗಳಲ್ಲಿ ಏಳು ಗಂಟೆಗೂ ಮುನ್ನವೇ ಜನರು ಸರತಿಯಲ್ಲಿ ನಿಂತಿದ್ದರು.ಇಲ್ಲಿನ ಕಫ್ ಪರೇಡ್‌ನ ಮತಕೇಂದ್ರ 216ರಲ್ಲಿ ಉದ್ಯಮಿ ಅನಿಲ್‌ ಅಂಬಾನಿ ಮತದಾನ ಮಾಡಿದರು. ಉತ್ತರ ಪ್ರದೇಶ ಗೋರಖ್‌ಪುರದ ಬಿಜೆಪಿ ಅಭ್ಯರ್ಥಿ ರವಿ ಕಿಶನ್‌ ಮುಂಬೈ ಗೊರೆಗಾಂನಲ್ಲಿ ಮತ ಚಲಾಯಿಸಿದರು.

ಮುಂಬೈ ಉತ್ತರ ಕ್ಷೇತ್ರದಿಂದ ಊರ್ಮಿಳಾ ಮಾತೋಂಡ್ಕರ್‌, ಉತ್ತರ ಮಧ್ಯ ಕ್ಷೇತ್ರದಿಂದಬಿಜೆಪಿಯ ಹಿರಿಯ ನಾಯಕರಾಗಿದ್ದ ಪ್ರಮೋದ್ ಮಹಾಜನ್‌ ಅವರ ಮಗಳು ಪೂನಂ ಮಹಾಜನ್‌ ಮತ್ತುಬಾಲಿವುಡ್‌ ತಾರೆ ಮತ್ತು ಕಾಂಗ್ರೆಸ್‌ ಮುಖಂಡರಾಗಿದ್ದ ಸುನಿಲ್‌ ದತ್‌ ಮಗಳು ಪ್ರಿಯಾ ದತ್‌ ಕಣಕ್ಕಿಳಿದಿದ್ದಾರೆ. ಮುಖೇಶ್‌ ಅಂಬಾನಿಯಿಂದಲೂ ಪ್ರಚಾರ ಪಡೆದಿದ್ದಕೇಂದ್ರ ಸಚಿವರಾಗಿದ್ದ ಮುರಳಿ ದೇವ್ರಾ ಅವರ ಮಗ ಮಿಲಿಂದ್‌ ದೇವ್ರಾ ಮುಂಬೈ ದಕ್ಷಿಣ ಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಶಿವಸೇನೆಯ ಅರವಿಂದ್‌ ಸಾವಂತ್‌ ಮಿಲಿಂದ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ. ಹೀಗೆ, ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳ ಕುಟುಂಬದಿಂದಲೇ ಬಂದ ಅಭ್ಯರ್ಥಿಗಳ ಸ್ಪರ್ಧೆಯಿಂದ ಮುಂಬೈ ಲೋಕಸಭಾ ಕ್ಷೇತ್ರಗಳು ಕುತೂಹಲ ಹೆಚ್ಚಿಸಿಕೊಂಡಿವೆ.

ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಗವರ್ನರ್‌ ಶಕ್ತಿಕಾಂತ ದಾಸ್‌ ಮುಂಬೈನ ಪೆಡರ್ ರೋಡ್‌ನ ಮತಗಟ್ಟೆ 40, 41ರಲ್ಲಿ ಮತದಾನ ಮಾಡಿದರು. ಬಾಂದ್ರಾದಲ್ಲಿ ಹಿರಿಯ ನಟಿ ರೇಖಾ ಹಾಗೂ ವರ್ಲಿಯಲ್ಲಿ ಬಿಜೆಪಿ ಅಭ್ಯರ್ಥಿಪೂನಂ ಮಹಾಜನ್‌ ಮತ ಚಲಾಯಿಸಿದರು. ಬಿಜೆಪಿ ಸಂಸದ ಪರೇಶ್‌ ರಾವಲ್‌ ಮತ್ತು ಪತ್ನಿ ಸ್ವರೂಪ್‌ ಸಂಪತ್‌ ಅವರು ವಿಲೇ ಪಾರ್ಲೆಯ ಮತಗಟ್ಟೆ ಸಂಖ್ಯೆ 250–256ರಲ್ಲಿ ಮತದಾನ ಮಾಡಿದರು.

ಇವಿಎಂನಲ್ಲಿ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಉಂಟಾದ ಕಾರಣ ಪಶ್ಚಿಮ ಬಂಗಾಳದ ಬೋಲ್ಫುರ ಮತಗಟ್ಟೆಗಳಲ್ಲಿ ಮತದಾನ ವಿಳಂಬವಾಗಿದೆ.

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ವಸುಂಧರಾ ರಾಜೇ ಅವರು ಝಾಲವಾದ ಮತಗಟ್ಟೆ ಸಂಖ್ಯೆ 33ರಲ್ಲಿ ಮತದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.