‘ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸ ನನ್ನ ವಿರೋಧಿಗಳಿಗೆ ಕಾಣಿಸುತ್ತಿಲ್ಲ. ಅವರ ಕಣ್ಣುಗಳಲ್ಲಿ ಪೊರೆ ಮೂಡಿರಬಹುದು. ನಾನು ಮಾಡಿರುವ ಕೆಲಸದ ಬಗ್ಗೆ ಜನರು ಏನು ಹೇಳುತ್ತಿದ್ದಾರೆ ಎಂಬುದನ್ನು ಕೇಳಲಾರದೆ ಅವರ ಕಿವಿಗಳು ಛಿದ್ರವಾಗಿರಬಹುದು. ಅವರ್ಯಾರೂ ಚಿಂತಿಸುವುದು ಬೇಡ. ಅವರ ಕಣ್ಣಿನ ಪೊರೆ ತೆಗೆಯಲು, ಕಿವಿಗಳಿಗೆ ಚಿಕಿತ್ಸೆ ನೀಡಲು ಗೋಪಿನಾಥ್ ಮುಂಡೆ ಪ್ರತಿಷ್ಠಾನದ ಸಹಯೋಗದಲ್ಲಿ ಬೃಹತ್ ಆರೋಗ್ಯ ಶಿಬಿರ ಆಯೋಜಿಸುತ್ತೇನೆ’
ಹೀಗೆ ಎದುರಾಳಿಗಳ ವಿರುದ್ಧ ಮಾತಿನ ಚಾಟಿ ಬೀಸಿ, ಕಾಲೆಳೆದವರು ಮಹರಾಷ್ಟ್ರದ ಬೀಡ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಂ ಮುಂಡೆ. ಅವರ ಮಾತುಗಳಲ್ಲಿವಿರೋಧಿಗಳ ಬಗ್ಗೆ ಆಕ್ರೋಶವಿತ್ತು. ಪ್ರತಿಸ್ಪರ್ಧಿಗಳ ರಣತಂತ್ರ ಮೆಟ್ಟಿನಿಲ್ಲುವವಿಶ್ವಾಸವಿತ್ತು. ಗೆದ್ದೇ ತೀರುವಆವೇಶವೂ.. ಪರಾಭವಗೊಳ್ಳುವವರ ಬಗ್ಗೆ ಅನುಕಂಪವೂ, ವ್ಯಂಗ್ಯವೂ, ಕೇಳುಗರಿಗೆ ಪುಳಕವಾಗುವ ರಂಜನೆಯೂ ಇತ್ತು.
ಚರ್ಮ ವೈದ್ಯೆಯಾಗಿದ್ದ ಮುಂಡೆ ರಾಜಕೀಯಕ್ಕೆಆಕಸ್ಮಿಕವಾಗಿ ಪ್ರವೇಶ ಪಡೆದವರು. ಬೀಡ್ ಕ್ಷೇತ್ರದ ಸಂಸದರಾಗಿದ್ದಅವರ ತಂದೆ ಗೋಪಿನಾಥ ಮುಂಡೆ 2014ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟರು. ಹಾಗಾಗಿ ಇವರು ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕಾಯಿತು. ತಂದೆ ಸಾವಿನ ಅನುಕಂಪದ ಅಲೆಯಲ್ಲಿ ತೇಲಿದ್ದ ಪ್ರೀತಂ, ಬರೋಬ್ಬರಿ 6,96,321 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಅಶೋಕರಾವ್ ಎಸ್.ಪಾಟೀಲ್ ಎದುರು ಗೆದ್ದು ಬೀಗಿದ್ದರು. ಇದು ಭಾರತದ ಚುನಾವಣಾ ಇತಿಹಾಸದಲ್ಲೆ ದೊಡ್ಡ ಅಂತರದ ಜಯವೆಂದು ದಾಖಲಾಯಿತು. ಆ ಮೂಲಕ ರಾಜಕೀಯ ಪ್ರವೇಶವನ್ನೂ ಸ್ಮರಣೀಯವಾಗಿಸಿಕೊಂಡಿದ್ದರು ಪ್ರೀತಂ. (ಅದಕ್ಕೂ ಮೊದಲು ಅತಿದೊಡ್ಡ ಜಯದ ದಾಖಲೆ ಅನಿಲ್ ಬಸು ಅವರ ಹೆಸರಿನಲ್ಲಿತ್ತು. 2004ರಲ್ಲಿ ಪಶ್ಚಿಮ ಬಂಗಾಳದ ಆರಂಭಾಗ್ ಕ್ಷೇತ್ರದಿಂದಸಿಪಿಎಂ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಸು, ಬಿಜೆಪಿಯ ಸ್ವಪನ್ ಕುಮಾರ್ ನಂದಿ ಅವರನ್ನು 5,92,502 ಮತಗಳ ಅಂತರದಿಂದ ಮಣಿಸಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ, ಕಣಕ್ಕಿಳಿದಿದ್ದ ಉಳಿದ ಕೆಲ ಪಕ್ಷಗಳು ಠೇವಣಿ ಕಳೆದುಕೊಂಡಿದ್ದವು.)
ತಂದೆ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದರೂ ರಾಜಕೀಯದ ಗಂಧಗಾಳಿಪ್ರೀತಂ ಅವರತ್ತ ಸುಳಿದಿರಲಿಲ್ಲ. ತಾನು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾಗಲೇ ಹಿರಿಯ ಸಹೋದರಿ ಪಂಕಜಾ ಮುಂಡೆ ವಿಧಾನಸಭೆಗೆ ಸ್ಪರ್ಧಿಸಿದ್ದರಾದರೂ ಅವರ ಪರ ಪ್ರಚಾರ ಮಾಡಲೂ ಹೋದವರಲ್ಲ ಪ್ರೀತಂ. ಅವರ ಗುರಿ ಡಾಕ್ಟರ್ ಆಗಬೇಕು ಮತ್ತು ಬೀಡ್‌ನ ಬಹುತೇಕ ಜನರು ಚಿಕಿತ್ಸೆಗಾಗಿ ಬರುವ ಜೆಜೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಬೇಕು ಎಂಬುದಷ್ಟೇ ಆಗಿತ್ತು. ಹಾಗಾಗಿಯೇ ತಾವು ರಾಜಕೀಯಕ್ಕೆ ಬಂದದ್ದನ್ನು ಅವರು, ‘ಅದೊಂದು ಅಚ್ಚರಿ. ಅದನ್ನು ನಾನೇ ನಂಬಲಾರೆ’ ಎನ್ನುತ್ತಾರೆ.
‘ಜನರಿಗಾಗಿ ವಿಶ್ರಾಂತಿ ಇಲ್ಲದೆ ಕೆಲಸಮಾಡುತ್ತಿದ್ದ ನನ್ನ ತಂದೆಯನ್ನು ಹತ್ತಿರದಿಂದ ನೋಡಿದ್ದೇನೆ. ಆದರೆ, ಅದನ್ನು ಕೇವಲ ನೋಡುವುದೇ ಬೇರೆ ಹಾಗೂ ಅದರಿಂದ ಕಲಿಯುವುದೇ ಬೇರೆ. ಇನ್ನು ನನ್ನ ಸೋದರಿ (ಪಂಕಜಾ ಮುಂಡೆ, ಬೀಡ್ ಜಿಲ್ಲೆಯ ಉಸ್ತುವಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ) ರಾಜಕೀಯವನ್ನು ಅಷ್ಟು ತನ್ಮಯಳಾಗಿ ಪಾಲಿಸಿಕೊಂಡು ಹೋಗುತ್ತಾಳೆಂದು ನಾನು ಭಾವಿಸಿರಲಿಲ್ಲ. ಜನರ ನೀರೀಕ್ಷೆಗಳಿಗೆ ತಕ್ಕಂತೆ ಪಂಕಜಾ ಮುನ್ನಡೆಯುತ್ತಿದ್ದಾಳೆ. ಇದು ತಂದೆಯಿಂದ ಕಲಿತದ್ದು’ ಎಂದು ತಂದೆ ಹಾಗೂ ಸೋದರಿ ರಾಜಕೀಯ ಜೀವನದ ಕುರಿತು ಪ್ರೀತಂ ವಿವರಿಸುತ್ತಾರೆ.
ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿದರೂ ಜನರು ಸ್ಪಂದಿಸಿದ ರೀತಿ ನಾನು ರಾಜಕೀಯದಲ್ಲಿ ಮುಂದುವರಿಯಲು ಸ್ಫೂರ್ತಿಯಾಯಿತು. ತಂದೆಗೆ ಸಿಕ್ಕಷ್ಟೇ ಪ್ರೀತಿ ನನಗೂ ದೊರೆತ ಕಾರಣ ದಾಖಲೆಯ ಗೆಲುವು ಸಾಧ್ಯವಾಯಿತು ಎಂದು ನೆನಪಿಸಿಕೊಳ್ಳುತ್ತಾರೆ.ಗೋಪಿನಾಥ್ ಅವರ ಪುತ್ರಿ ಎನ್ನುವ ಕಾರಣಕ್ಕೆ ಲೋಕಸಭೆಯಲ್ಲಿ ಪ್ರೀತಂ ಅವರನ್ನು ಪಕ್ಷದ ಇತರ ನಾಯಕರೂ ಪ್ರೋತ್ಸಾಹಿಸಿದ್ದಾರೆ.
2015ರ ಫೆಬ್ರುವರಿಯಲ್ಲಿ ರೈಲ್ವೇ ಬಜೆಟ್ ಮಂಡನೆಯಾದ ಬಳಿಕ ಮೊದಲ ಸಲಸಂಸತ್ತಿನಲ್ಲಿ ಮಾತನಾಡಿದ್ದ ಪ್ರೀತಂ, ಬೀಡ್ ಮಾರ್ಗವಾಗಿ ಅಹ್ಮದ್‌ನಗರ–ಪರಾಲಿ ನಗರಗಳಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆಗಾಗಿ ಆಗ್ರಹಿಸಿದ್ದರು. ಅದಕ್ಕಾಗಿ ₹ 1000ಕೋಟಿ ಅನುದಾನವೂ ಬಿಡುಗಡೆಯಾಗಿತ್ತು. ರೈಲು ಯೋಜನೆ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲಿನ ಬರ, ರೈತರ ಸಮಸ್ಯೆ ಹಾಗೂ ಹಿಂದುಳಿದ ವರ್ಗದವರ ಸಮಸ್ಯೆಗಳಿಗೆ ಸಂಬಂಧಿಸಿದಂತೆಯೂ ಹಲವು ಸಂದರ್ಭಗಳಲ್ಲಿ ದನಿ ಏರಿಸಿದ್ದರು.
ದೆಹಲಿಯಲ್ಲಿ ಇಲ್ಲದ/ಸಂಸತ್‌ಗೆ ಹೋಗದ ದಿನಗಳಲ್ಲಿ ಮುಂಬೈ ಇಲ್ಲವೇ ಬೀಡ್‌ನಲ್ಲಿಯೇ ಉಳಿಯುವ ಪ್ರೀತಂ, ಹೊರಗೆಲ್ಲೋ ಹೋಗಿ ಕಾಲ ಕಳೆಯುವುದನ್ನು ಇಷ್ಟಪಡುವುದಿಲ್ಲ. ಜಿಲೇಬಿ ಅವರ ಇಷ್ಟದ ಸಿಹಿ ತಿನಿಸು. ಸಿನಿಮಾ ನೋಡುವುದನ್ನೂ ಇಷ್ಟಪಡುತ್ತಾರೆ. ‘ನನ್ನ ಮಗ ಅಗಸ್ತ್ಯನಿಗೆ ಈಗ 6 ವರ್ಷ. ಅವನೊಡನೆ ಕಾಲಕಳೆಯುವುದನ್ನು ಹೆಚ್ಚು ಇಷ್ಟಪಡುತ್ತೇನೆ. ನಾನು ಪುಸ್ತಕ ಪ್ರೇಮಿ. ಛತ್ರಪತಿ ಶಿವಾಜಿ ಅವರ ಜೀವನಾಧಾರಿತ ಕೃತಿಶ್ರೀಮಾನ್ ಯೋಗಿ ಪುಸ್ತಕವನ್ನು ಇದೀಗ ಎರಡನೇ ಬಾರಿಗೆ ಓದುತ್ತಿದ್ದೇನೆ’ ಎನ್ನುತ್ತಾರೆ ಪ್ರೀತಂ.
ಪ್ರೀತಂಗೆ ಪ್ರತಿಸ್ಪರ್ಧಿಯಾಗಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಭಜರಂಗ್ ಸೋನ್ವಾನೆ ಅವರು ಕಣದಲ್ಲಿದ್ದಾರೆ. 2014ರ ಉಪಚುನಾವಣೆಯಲ್ಲಿದ್ದಂತೆ ಈ ಬಾರಿ ಅನುಕಂಪದ ಅಲೆ ಪ್ರೀತಂ ಜೊತೆಗಿಲ್ಲ. ಮಾತ್ರವಲ್ಲ ಎದುರಾಳಿ ಪರವಾಗಿ ಎನ್‌ಸಿಪಿ ನಾಯಕ ಹಾಗೂ ಸಂಬಂಧಿ ಧನಂಜಯ ಮುಂಡೆ ಅವರೇ ಪ್ರಚಾರ ಮಾಡುತ್ತಿದ್ದಾರೆ. ಆದಾಗ್ಯೂಧನಂಜಯ್ ಪ್ರಚಾರದಿಂದ ಕಿಂಚಿತ್ತೂ ಅಳುಕದ ಪ್ರೀತಂ, ‘ಅವರು(ಧನಂಜಯ್ ಮುಂಡೆ) ಯಾವಾಗಲೂ ನಮ್ಮ ವಿರುದ್ಧ ಮಾತನಾಡುತ್ತಾರೆ. ಅದನ್ನೇ ಬಳಸಿಕೊಂಡು ಪ್ರಚಾರ ಮಾಡಿದ್ದೇವೆ. ಮಾತ್ರವಲ್ಲ ಜನರೂ ಅವರ ಮಾತುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ’ ಎಂದು ಮಾತು ತೇಲಿಸುತ್ತಾರೆ. ಕ್ಷೇತ್ರದಲ್ಲಿ ಸೋದರಿ ಪಂಕಜಾ ಹಾಗೂ ತಾನು ಮಾಡಿರುವ ಕೆಲಸಗಳ ಬಲದಿಂದ ಗೆದ್ದೇ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ ಗೋಪಿನಾಥ್ ಪುತ್ರಿ.
ಎರಡನೇ ಹಂತದಲ್ಲಿ ಬೀಡ್ ಲೋಕಸಭೆ ಕ್ಷೇತ್ರಕ್ಕೆ ಮತದಾನ ನಡೆದಿದ್ದು, ಮೇ 23ರಂದು ಫಲಿತಾಂಶ ಹೊರಬೀಳಲಿದೆ. ಪ್ರೀತಂ ಜಯದ ಓಟ ಮುನ್ನಡೆಸುತ್ತಾರೆಯೇ ಎಂಬುದನ್ನು ತಿಳಿಯಲು ಅಲ್ಲಿವರೆಗೆ ಕಾಯಲೇಬೇಕು.
(ವಿಡಿಯೊ ಮತ್ತು ಮಾಹಿತಿ– ಅಭಿಲಾಷ್ ಎಸ್.ಡಿ.)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.