ನವದೆಹಲಿ: ಮುಂಬುರುವ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಏಳು ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡುವುದಾಗಿ ಎಎಪಿ ಮಂಗಳವಾರ ತಿಳಿಸಿದೆ.
ಈಗಾಗಲೇ ಎಎಪಿ ಪಂಜಾಬ್ ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲೇ ಎಎಪಿಯ ಹಿರಿಯ ಮುಖಂಡ ಹಾಗೂ ಸಂಸದ ಸಂದೀಪ್ ಪಾಠಕ್ ಅವರು ದೆಹಲಿಯಲ್ಲಿ ಕಾಂಗ್ರೆಸ್‌ಗೆ ಒಂದು ಸ್ಥಾನ ಬಿಟ್ಟುಕೊಡುವುದಾಗಿ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದರಿಂದಾಗಿ ಕಾಂಗ್ರೆಸ್ ಮತ್ತು ಎಎಪಿ ನಡುವೆ ಸೀಟು ಹಂಚಿಕೆಯಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇಂಡಿಯಾ ಕೂಟದ ಭಾಗವಾಗಿರುವ ಎಎಪಿಯು ಮೈತ್ರಿ ಧರ್ಮವನ್ನು ಗಮನದಲ್ಲಿಟ್ಟುಕೊಂಡು ನಾವು ಅವರಿಗೆ ಒಂದು ಸ್ಥಾನವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ವಾಸ್ತವವಾಗಿ ದೆಹಲಿಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಒಂದೂ ಸ್ಥಾನಕ್ಕೂ ಅರ್ಹವಾಗಿಲ್ಲ, ಮೈತ್ರಿ ಧರ್ಮದ ಕಾರಣಕ್ಕೆ ಅವರಿಗೆ ಒಂದು ಸ್ಥಾನವನ್ನು ನೀಡುತ್ತೇವೆ. ದೆಹಲಿಯಲ್ಲಿ ನಮ್ಮ ಪಕ್ಷ ಬಲವಾಗಿದ್ದು, ಕಾಂಗ್ರೆಸ್ ನೆಲೆ ಕಳೆದುಕೊಂಡಿದೆ. ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ. ಹಾಗೇ ದೇಶದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಸತತವಾಗಿ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ದೆಹಲಿಯಲ್ಲಿ 4:3 ಸೀಟು ಹಂಚಿಕೆ ಸೂತ್ರವನ್ನು ಎಎಪಿ ಮುಂದೆ ಇಟ್ಟಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಸೂತ್ರವನ್ನು ಒಪ್ಪಲು ಎಎಪಿ ತಯಾರಿಲ್ಲ, ಮೈತ್ರಿ ಕಾರಣಕ್ಕೆ 1 ಸ್ಥಾನ ನೀಡುವುದಾಗಿ ಅದು ತಿಳಿಸಿದೆ.
ಪ್ರಸ್ತುತ ದೆಹಲಿಯಲ್ಲಿ ಅಧಿಕಾರದಲ್ಲಿರುವ ಎಎಪಿ ಹಾಗೂ ಕಾಂಗ್ರೆಸ್ 2019ರ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಸ್ಥಾನವನ್ನು ಗೆದ್ದಿಲ್ಲ. ಎಲ್ಲಾ ಏಳು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.