ನವದೆಹಲಿ: ಹರಿಯಾಣಾದ ಫರಿದಾಬಾದ್ ಮತಗಟ್ಟೆಯೊಂದರಲ್ಲಿ ಮತದಾರರ ಓಲೈಕೆಗೆ ಯತ್ನಿಸುತ್ತಿದ್ದ ಏಜೆಂಟ್ ಒಬ್ಬನನ್ನು ಬಂಧಿಸಲಾಗಿದೆ.
ಮೇ 12ರಂದು ನಡೆದ ಆರನೇ ಹಂತದ ಚುನಾವಣೆಯಲ್ಲಿ ಫರಿದಾಬಾದ್ ಜನರು ಮತದಾನ ಮಾಡಿದ್ದರು. ಮತಗಟ್ಟೆಯ ಏಜೆಂಟ್ ಮತದಾರರ ಮೇಲೆ ಪ್ರಭಾವ ಬೀರುವ ವರ್ತನೆ ತೋರುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಭಾನುವಾರ ಮಧ್ಯಾಹ್ನ ಆ ಏಜೆಂಟ್‌ನನ್ನು ಬಂಧಿಸಲಾಗಿದೆ ಎಂದು ಚುನಾವಣಾ ಆಯುಕ್ತ ಅಶೋಕ್ ಲಾವಸಾ ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣದ ಕುರಿತು ಚುನಾವಣಾ ಆಯೋಗ ಪರಿಶೀಲನೆ ನಡೆಸಲಿದೆ ಎಂದಿದ್ದಾರೆ.
ನೀಲಿ ಬಣ್ಣದ ಟಿ–ಶರ್ಟ್ ಧರಿಸಿರುವ ಮತಗಟ್ಟೆ ಏಜೆಂಟ್, ಮತಗಟ್ಟೆಯ ಬಳಿಗೆ ಹೋಗಿರುವುದನ್ನು ಕಾಣಬಹುದು. ಅದೇ ಸಮಯದಲ್ಲಿ ಮಹಿಳೆಯೊಬ್ಬರು ಮತದಾನ ನಡೆಸಲು ಅಣಿಯಾಗುತ್ತಿದ್ದರು. ಆತ ಇವಿಎಂ ಬಟನ್ ಒತ್ತಿರುವುದು ಅಥವಾ ಪಕ್ಷದ ಚಿಹ್ನೆಯನ್ನು ತೋರಿಸಿರುವಂತೆ ವಿಡಿಯೊದಲ್ಲಿ ಕಂಡು ಬಂದಿದೆ. ಮತ್ತೆ ತನ್ನ ಸ್ಥಳಕ್ಕೆ ಬಂದು ಕೂರುವ ಆತ ಇದೇ ರೀತಿ ಮತ್ತೆ ಇಬ್ಬರು ಮಹಿಳಾ ಮತದಾರರು ಬಂದಾಗ ನಡೆಸುತ್ತಾನೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಹಲವರು ವಿಡಿಯೊಗೆ ಚುನಾವಣಾ ಆಯೋಗವನ್ನು ಟ್ಯಾಗ್ ಮಾಡಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು.
‘ಚುನಾವಣಾ ವೀಕ್ಷಕ ಸಂಜಯ್ ಕುಮಾರ್ ಅವರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ವಿಡಿಯೊದಲ್ಲಿ ಕಾಣುವ ವ್ಯಕ್ತಿ ಮತಗಟ್ಟೆ ಏಜೆಂಟ್ ಆಗಿದ್ದು, ಆತನನ್ನು ಭಾನುವಾರ ಮಧ್ಯಾಹ್ನವೇ ಬಂಧಿಸಲಾಗಿದೆ. ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ವರದಿ ನೀಡಿದ್ದಾರೆ'- ಈ ಕುರಿತು ಲಾವಸಾ ಟ್ವೀಟ್ ಮಾಡಿದ್ದಾರೆ.
‘ಪ್ರಮಾಣಿಕವಾಗಿ ಕ್ರಮಕೈಗೊಳ್ಳಲಾಗಿದೆ. ಎಫ್‌ಐಆರ್ ದಾಖಲಾಗಿದ್ದು, ಆತ ಕಂಬಿಗಳ ಹಿಂದಿದ್ದಾನೆ. ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಅಡಚಣೆಯಾಗಿಲ್ಲ’ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಟ್ವೀಟಿಸಿದ್ದಾರೆ.
ಮೇ 12ರಂದು ಹರಿಯಾಣದ ಎಲ್ಲ 10 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಫರಿದಾಬಾದ್‌ನಲ್ಲಿ ಶೇ 64.48ರಷ್ಟು ಮತದಾನ ದಾಖಲಾಗಿದೆ. ಕೇಂದ್ರ ಸಚಿವ ಕೃಷನ್ ಪಾಲ್ ಗುರ್ಜರ್, ಕಾಂಗ್ರೆಸ್‌ನ ಅವತಾರ್ ಸಿಂಗ್ ಭಡಾನಾ ಹಾಗೂ ಐಎನ್‌ಎಲ್‌ಡಿಯ ಮಹೇಂದರ್ ಚೌಹಾಣ್ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.