ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಾಣಸಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧೆ ಮಾಡಿದರೆ ಗೆಲುವು ಸಾಧಿಸಲಿದ್ದಾರೆ ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಸಂಜಯ್ ರಾವುತ್ ಅವರ ಹೇಳಿಕೆಯನ್ನು ’ಎಎನ್‌ಐ’ ಸುದ್ದಿಸಂಸ್ಥೆ ಮೈಕ್ರೋಬ್ಲಾಂಗಿಗ್ ತಾಣ ‘ಎಕ್ಸ್’ನಲ್ಲಿ ಬರೆದುಕೊಂಡಿದೆ.
’ಒಂದು ವೇಳೆ ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಿದರೆ ಖಂಡಿತವಾಗಿ ಗೆಲುವು ಸಾಧಿಸಲಿದ್ದಾರೆ. ವಾರಾಣಸಿಯ ಜನ ಪ್ರಿಯಾಂಕಾ ಗಾಂಧಿಯವರನ್ನು ಬಯಸಿದ್ದಾರೆ’ ಎಂದು ರಾವುತ್ ಹೇಳಿದ್ದಾರೆ.
ಅಲ್ಲದೆ, ಮುಂದಿನ ಚುನಾವಣೆಯಲ್ಲಿ ರಾಯ್‌ಬರೇಲಿ, ವಾರಾಣಸಿ ಹಾಗೂ ಅಮೇಥಿ ಕ್ಷೇತ್ರಗಳಲ್ಲಿ ಗೆಲ್ಲುವುದು ಬಿಜೆಪಿಗೆ ಕಠಿಣವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ರಾಯ್‌ಬರೇಲಿ ಕ್ಷೇತ್ರವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪ್ರತಿನಿಧಿಸುತ್ತಿದ್ದಾರೆ. ಕಳೆದೆರಡು ಅವಧಿಗಳಿಂದ ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
2004ರಿಂದ 2019ರಿಂದ ಅಮೇಥಿ ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೆದ್ದುಕೊಂಡಿದ್ದರು. 2019ರಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋಲು ಕಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.