ಬೆಂಗಳೂರು: ವಿಕಲಾಂಗ ಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳುವ ಮೂಲಕ ಚಿತ್ರನಟ ಪ್ರಕಾಶ್ ರಾಜ್ ಅವರು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ವ್ಯಂಗ್ಯವಾಡಿದ್ದಾರೆ.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಭೆಯಲ್ಲಿ ಹಾಜರಾಗಿದ್ದ ಬಿಜೆಪಿ ನಾಯಕರ ಫೋಟೊವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಪ್ರಕಾಶ್ ರಾಜ್, ‘ವಿಕಲಾಂಗ ಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಎಲ್ಲವೂ ಸರಿಯಿಲ್ಲ. ಖಚಿತವಾಗಿ ಏನೋ ಪಿತೂರಿ ನಡೆಯುತ್ತಿದೆ. ಎಲ್ಲರಿಗೂ ವಾರಾಂತ್ಯದ ಶುಭಾಶಯಗಳು.. #justasking’ ಎಂದು ಪೋಸ್ಟ್ ಮಾಡಿದ್ದಾರೆ.
ಈಚೆಗೆ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಕಾಶ ರಾಜ್, ‘ಕೇಂದ್ರದಲ್ಲಿ ಆತಂಕವಾದಿಗಳ ಸರ್ಕಾರ ಇದೆ. ಈಗ ಧರ್ಮ, ಜಾತಿ, ಮಂದಿರ ಹಾಗೂ ಮಾಂಗಲ್ಯದ ಬಗ್ಗೆ ಮಾತನಾಡುತ್ತಾರೆ. ಈ ಸರ್ವಾಧಿಕಾರಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು’ ಎಂದು ಹೇಳಿದ್ದರು.
‘ಕೇಂದ್ರ ಸರ್ಕಾರದ ನಾಯಕರು ರಾಜರಂತೆ ಓಡಾಡುತ್ತಾರೆ. ಈಗಿನ ಮಹಾಪ್ರಭು ಕೈ ಮಾಡಿಕೊಂಡು ಓಡಾಡುತ್ತಿದ್ದಾರೆ. ಪುಷ್ಪಕ ವಿಮಾನದಲ್ಲಿ ಓಡಾಡುತ್ತಿದ್ದಾರೆ. ನಮ್ಮನ್ನು ಸ್ಪರ್ಶಿಸದ ವ್ಯಕ್ತಿ ನಮ್ಮ ಸಮಸ್ಯೆ ಅರ್ಥ ಮಾಡಿಕೊಳ್ಳುತ್ತಾರಾ’ ಎಂದು ಪ್ರಧಾನಿ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದರು.
ಕೇಂದ್ರ ಸರ್ಕಾರದಿಂದ ಉದ್ಯೋಗದ ಗ್ಯಾರಂಟಿ ಇಲ್ಲ. ಕಳೆಪೆ ಮಟ್ಟದ ಆಹಾರ ನೀಡುತ್ತಿದೆ. ಎಲ್ಲಾ ಕೆಲಸಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು ಹಚ್ಚಲಾಗುತ್ತಿದೆ. ಆಗಾಗ ಬಿಟ್ಟಿ ಭಾಗ್ಯ ಕೊಡುವುದು, ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಬೆಂಬಲ ಬೆಲೆ ಕೇಳಿದರೆ ರಸ್ತೆ ಅಗೆದು, ವಾಟರ್ ಗನ್ ಹೊಡೆಯುತ್ತಾರೆ. ಈ ಬಗ್ಗೆ ಮಾತನಾಡಿದರೆ ‘ತುಕಡೇ ತುಕಡೇ ಗ್ಯಾಂಗ್’ ಅಂತಾರೆ. ಚುನಾವಣೆಯ ಚಾಣಕ್ಯ ಈ ಬಗ್ಗೆ ಮಾತನಾಡಲಿ ಎಂದು ಹೇಳಿದ್ದರು.
ಸಂಸತ್ತಿನಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ನಾಯಕನನ್ನಾಗಿ ನರೇಂದ್ರ ಮೋದಿ ಅವರನ್ನು ಎನ್‌ಡಿಎ ಸಂಸದರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ದೇಶ ವಿದೇಶದ ಗಣ್ಯರ ಸಮ್ಮುಖದಲ್ಲಿ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ನಾಳೆ (ಭಾನುವಾರ) ರಾತ್ರಿ 7.15ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮೈತ್ರಿಕೂಟದ ನಾಯಕರಾಗಿ ಆಯ್ಕೆಯಾದ ಬೆನ್ನಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಮೋದಿ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ‘ಪ್ರಮಾಣವಚನಕ್ಕೆ ಮುನ್ನ ಸಚಿವರ ಪಟ್ಟಿಯನ್ನು ರಾಷ್ಟ್ರಪತಿ ಅವರಿಗೆ ನೀಡುತ್ತೇನೆ’ ಎಂದು ಮೋದಿ ತಿಳಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೋದಿ ಅವರ ಜತೆಗೆ 30 ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಂಭವ ಇದೆ.
ಗುಜರಾತ್ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಿಯಾಗಿ ಕಳೆದ 22 ವರ್ಷಗಳಲ್ಲಿ ಬಿಜೆಪಿಯ ಬಹುಮತದ ಸರ್ಕಾರವನ್ನು ಮುನ್ನಡೆಸಿದ್ದ ಮೋದಿ ಅವರು ಮೊದಲ ಬಾರಿಗೆ ಮೈತ್ರಿ ಸರ್ಕಾರ ಮುನ್ನಡೆಸಲು ಸಜ್ಜಾಗಿದ್ದಾರೆ. ಮೈತ್ರಿ ಧರ್ಮ ಪಾಲನೆಯನ್ನು ಗಮನದಲ್ಲಿಟ್ಟುಕೊಂಡು, ದೇಶ ಮುನ್ನಡೆಸಲು ಒಮ್ಮತದ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ಅದನ್ನು ಮುಂದುವರಿಸುವುದು ತಮ್ಮ ಜವಾಬ್ದಾರಿ ಎಂದೂ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.