ADVERTISEMENT

ಶಾಸಕ ಸ್ಥಾನಕ್ಕೆ ರಾಜೀನಾಮೆ: ಕನೌಜ್‌ ಲೋಕಸಭಾ ಕ್ಷೇತ್ರ ಉಳಿಸಿಕೊಂಡ ಅಖಿಲೇಶ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 12:31 IST
Last Updated 12 ಜೂನ್ 2024, 12:31 IST
<div class="paragraphs"><p>ಅಖಿಲೇಶ್ ಯಾದವ್‌</p></div>

ಅಖಿಲೇಶ್ ಯಾದವ್‌

   

- ಪಿಟಿಐ

ಲಖನೌ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಕರಹಲ್ ವಿಧಾನಸಭಾ ಕ್ಷೇತ್ರದ ಶಾಸಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕನೌಜ್ ಲೋಕಸಭಾ ಕ್ಷೇತ್ರದ ಸಂಸದನ ಸ್ಥಾನದಲ್ಲಿ ಮುಂದುವರಿಯಲು ಅವರು ತೀರ್ಮಾನಿಸಿದ್ದಾರೆ. ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಕನೌಜ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ADVERTISEMENT

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ, ಕನೌಜ್ ಕ್ಷೇತ್ರದ ಪ್ರತಿನಿಧಿಯಾಗಿ ಮುಂದುವರಿಯುವ ಸೂಚನೆಯನ್ನು ಅಖಿಲೇಶ್ ಈ ಹಿಂದೆ ನೀಡಿದ್ದರು. ‘ಎರಡೂ ಕ್ಷೇತ್ರಗಳಲ್ಲಿನ ಪಕ್ಷದ ಪ್ರಮುಖರು, ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದರು.

ಎಸ್‌ಪಿ ಈಗ ಲೋಕಸಭೆಯಲ್ಲಿ 37 ಸಂಸದರನ್ನು ಹೊಂದಿದ್ದು, ದೊಡ್ಡ ಶಕ್ತಿಯಾಗಿ ಬೆಳೆದಿದೆ. ಸಂಖ್ಯಾಬಲದ ಆಧಾರದಲ್ಲಿ ಎಸ್‌ಪಿ ಲೋಕಸಭೆಯಲ್ಲಿ ಈಗ ಮೂರನೆಯ ಅತಿದೊಡ್ಡ ಪಕ್ಷವಾಗಿದೆ ಎಂದು ಅವರು ಹೇಳಿದರು.

ಅಖಿಲೇಶ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಇದ್ದರೆ, ಪಕ್ಷದ ನೆಲೆ ವಿಸ್ತರಿಸಲು ಸಹಾಯವಾಗುತ್ತದೆ. ಅಲ್ಲದೆ, ಅಖಿಲೇಶ್ ಅವರೂ ರಾಜಕೀಯವಾಗಿ ಬೆಳೆಯುತ್ತಾರೆ ಎಂದು ಪಕ್ಷದ ನಾಯಕರು ಅಭಿಪ್ರಾಯಪಟ್ಟರು ಎಂದು ಅವರು ವಿವರಿಸಿದರು.

ಅಖಿಲೇಶ್ ಅವರು ಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕರೂ ಹೌದು. ಶಾಸಕ ಸ್ಥಾನಕ್ಕೆ ತಾವು ರಾಜೀನಾಮೆ ಸಲ್ಲಿಸಿದ ನಂತರ, ವಿರೋಧ ಪಕ್ಷದ ನಾಯಕ ಯಾರಾಗಬೇಕು ಎಂಬುದನ್ನು ಪಕ್ಷವು ತೀರ್ಮಾನಿಸುತ್ತದೆ ಎಂದು ಅಖಿಲೇಶ್ ಹೇಳಿದ್ದಾರೆ. ಅಖಿಲೇಶ್ ಅವರ ಸಂಬಂಧಿ ಶಿವಪಾಲ್ ಸಿಂಗ್ ಯಾದವ್ ಅವರು ಆ ಸ್ಥಾನಕ್ಕೆ ಬರಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಖಿಲೇಶ್ ಅವರ ಇನ್ನೊಬ್ಬ ಸಂಬಂಧಿ ತೇಜ್ ಪ್ರತಾಪ್ ಯಾದವ್ ಅವರು ಕರಹಲ್ ಕ್ಷೇತ್ರದಿಂದ ಕಣಕ್ಕೆ ಇಳಿಯಬಹುದು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.