ನವದೆಹಲಿ: ಬಿಜೆಪಿ ನಾಯಕ ಅಮಿತ್ ಶಾ ಅವರು ಇಂದು (ಮಂಗಳವಾರ) ಎರಡನೇ ಬಾರಿಗೆ ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ದೆಹಲಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಭೇಟಿ ನೀಡಿದ್ದ ಅವರು, ದೇಶದ ಸೇವೆಗಾಗಿ ಹುತಾತ್ಮರಾಗಿದ್ದ ಪೊಲೀಸರಿಗೆ ಗೌರವ ಸಲ್ಲಿಸಿದರು.
ಮೋದಿ ಅವರ ಅತ್ಯಂತ ಆತ್ಮೀಯರಾಗಿರುವ 59 ವರ್ಷದ ಅಮಿತ್ ಶಾ, ಸತತ ಎರಡನೇ ಬಾರಿಗೆ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಬಿಜೆಪಿಯ ‘ಚುನಾವಣಾ ಚಾಣಕ್ಯ’ ಎನಿಸಿಕೊಂಡಿರುವ ಅವರು ಎನ್‌ಡಿಎ ಮೈತ್ರಿಕೂಟವನ್ನು ಮತ್ತೆ ಅಧಿಕಾರಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. 2019ರಿಂದಲೂ ಗೃಹ ಖಾತೆ ನಿಭಾಯಿಸಿದ್ದಾರೆ. 2014ರಿಂದ 2020ರ ವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರದ ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಲಾಗಿದೆ. ಈ ಬಾರಿ, ಕಳೆದ ಸರ್ಕಾರದಲ್ಲಿ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯ ಭಾಗವಾಗಿದ್ದ ನಾಲ್ವರ ಖಾತೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಮೋದಿ ಅವರು ಮಾಡಿಲ್ಲ.
ಅಮಿತ್ ಶಾ (ಗೃಹ), ರಾಜನಾಥ್ ಸಿಂಗ್ (ರಕ್ಷಣೆ), ನಿರ್ಮಲಾ ಸೀತಾರಾಮನ್ (ಹಣಕಾಸು, ಕಾರ್ಪೊರೇಟ್ ವ್ಯವಹಾರ), ಎಸ್.ಜೈಶಂಕರ್ (ವಿದೇಶಾಂಗ) ಅದೇ ಖಾತೆಗಳಲ್ಲಿ ಮುಂದುವರಿಯಲಿದ್ದಾರೆ. ನಿತಿನ್ ಗಡ್ಕರಿ (ಹೆದ್ದಾರಿ), ಪೀಯೂಷ್ ಗೋಯಲ್ (ವಾಣಿಜ್ಯ), ಧರ್ಮೇಂದ್ರ ಪ್ರಧಾನ್ (ಶಿಕ್ಷಣ), ಭೂಪೇಂದ್ರ ಯಾದವ್ (ಪರಿಸರ) ಅವರಿಗೆ ಹಿಂದಿನ ಖಾತೆಗಳನ್ನೇ ನೀಡಲಾಗಿದೆ. ಇದು ಹಿಂದಿನ ಸರ್ಕಾರದ ಆಡಳಿತದ ನಿರಂತರತೆಗೆ ಒತ್ತು ನೀಡಿರುವುದನ್ನು ಸೂಚಿಸುತ್ತದೆ. ಜತೆಗೆ, ಮೋದಿ ಅವರು ಖಾತೆ ಹಂಚಿಕೆಯಲ್ಲಿ ಅಚ್ಚರಿಯ ಪ್ರಯೋಗಗಳಿಗೆ ಕೈ ಹಾಕಿಲ್ಲ. ಮಿತ್ರ ಪಕ್ಷಗಳ ಒತ್ತಡಗಳಿಗೂ ಮಣೆ ಹಾಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.