ನವದೆಹಲಿ: ಅನ್ನಪೂರ್ಣ ದೇವಿ ಅವರು ಇಂದು (ಮಂಗಳವಾರ) ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಅಧಿಕಾರ ವಹಿಸಿಕೊಳ್ಳುವ ಮುನ್ನ, 55 ವರ್ಷದ ದೇವಿ ಅವರು ಮಾಜಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಸ್ಮೃತಿ ಇರಾನಿ ಅವರನ್ನು ಅವರ ನಿವಾಸದಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಿ ಮಾರ್ಗದರ್ಶನ ಪಡೆದಿದ್ದೇನೆ. ಸ್ಮೃತಿ ಅವರು ನೀಡಿದ ಪ್ರೀತಿಯ ಸ್ವಾಗತ ಆತ್ಮೀಯವಾಗಿತ್ತು. ಅವರ ಸ್ಫೂರ್ತಿದಾಯಕ ಮಾರ್ಗದರ್ಶನವು ನನಗೆ ಬೆಳಕಿನ ಕಿರಣದಂತೆ ಯಾವಾಗಲೂ ಉಪಯುಕ್ತವಾಗಿರುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ಕನಸನ್ನು ನನಸಾಗಿಸಲು ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆಯಾಗಿ ಸಾವಿತ್ರಿ ಠಾಕೂರ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಳ್ಳುವ ಮುನ್ನ ತಮ್ಮ ಕಚೇರಿಯಲ್ಲಿ ಪೂಜೆ ಸಲ್ಲಿಸಿದ್ದಾರೆ.
ಸ್ಮೃತಿ ಇರಾನಿ ಅವರು ಹಿಂದಿನ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದರು. ಅವರು ಈ ಸಲ ಸೋತಿದ್ದಾರೆ. ಈ ಬಾರಿ ಈ ಖಾತೆಯನ್ನು ಅನ್ನಪೂರ್ಣ ದೇವಿ ಅವರಿಗೆ ಕೊಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರದ ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.