ಮುಂಬೈ: ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಕಾಲೆಳೆದ್ದಾರೆ.
ಶಿವಸೇನಾ (ಉದ್ಧವ್ ಠಾಕ್ರೆ ಬಣ–ಯುಬಿಟಿ), ಕಾಂಗ್ರೆಸ್ ಹಾಗೂ ಎನ್‌ಸಿಪಿ (ಶರದ್ ಪವಾರ್ ಬಣ–ಎಸ್‌ಪಿ) ಎಂವಿಎ ಮೈತ್ರಿಕೂಟದಲ್ಲಿವೆ.
ಪೃಥ್ವಿರಾಜ್ ಚವಾಣ್ ಅವರು ನಗರದಲ್ಲಿ ನಡೆದ ಎಂವಿಪಿ ನಾಯಕರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಅವರೊಂದಿಗೆ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಇದ್ದರು.
ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾವಣೆಯೂ ಸನ್ನಿಹಿತವಾಗಿದೆ ಎಂದು ಚವಾಣ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ಮೋದಿ ಕಾಲೆಳೆದಿರುವ ಅವರು, 'ಎಂವಿಎಗೆ ಪೂರಕವಾದ ರಾಜಕೀಯ ವಾತಾವರಣ ಸೃಷ್ಟಿಸಿದ್ದಕ್ಕಾಗಿ ಪ್ರಧಾನಿಗೆ ಧನ್ಯವಾದಗಳು' ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಠಾಕ್ರೆ, ಈ ಚುನಾವಣೆಯು ಬಿಜೆಪಿಯ ಟೊಳ್ಳು ಸಾಮರ್ಥ್ಯವನ್ನು ಅನಾವರಣ ಮಾಡಿದೆ ಎಂದಿದ್ದಾರೆ. 'ಮಹಾ ವಿಕಾಸ ಆಘಾಡಿ ಲೋಕಸಭಾ ಚುನಾವಣೆಯಲ್ಲಿ ಸಾಧಿಸಿರುವ ಗೆಲುವು ಅಂತ್ಯವಲ್ಲ, ಆರಂಭ' ಎಂದು ಪ್ರತಿಪಾದಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿಯೂ ಎಂವಿಎ ಗೆಲುವು ಸಾಧಿಸಲಿದೆ ಎನ್ನುವ ಮೂಲಕ, ಆಡಳಿತಾರೂಢ 'ಮಹಾಯುತಿ' (ಬಿಜೆಪಿ–ಶಿವಸೇನಾ ಮತ್ತು ಎನ್‌ಸಿಪಿ) ಮೈತ್ರಿಕೂಟಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ 48 ಲೋಕಸಭಾ ಕ್ಷೇತ್ರಗಳಿವೆ. ಈಚೆಗೆ ನಡೆದ ಚುನಾವಣೆಯಲ್ಲಿ ಎಂವಿಎ ಬಣ 30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ, ಕಾಂಗ್ರೆಸ್ 13 ಸ್ಥಾನಗಳಲ್ಲಿ, ಶಿವಸೇನಾ (ಯುಬಿಟಿ) 9 ಕಡೆ ಹಾಗೂ ಎನ್‌ಸಿಪಿ (ಎಸ್‌ಪಿ) 8ರಲ್ಲಿ ಗೆಲುವು ಸಾಧಿಸಿದೆ.
ಉಳಿದ 18 ಕ್ಷೇತ್ರಗಳ ಪೈಕಿ 17ರಲ್ಲಿ 'ಮಹಾಯುತಿ' ಮೈತ್ರಿಕೂಟ ಜಯ ಗಳಿಸಿದೆ. ಬಿಜೆಪಿ 9, ಶಿವಸೇನಾ 7 ಮತ್ತು ಎನ್‌ಸಿಪಿ 1 ಸ್ಥಾನ ಗೆದ್ದಿದೆ. ಉಳಿದೊಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ.
ರಾಜ್ಯ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದ್ದು, ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.