ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ 370 ಸ್ಥಾನಗಳನ್ನು ಗೆಲ್ಲಬೇಕೆಂದು ಪಣ ತೊಟ್ಟಿರುವ ಆಡಳಿತಾರೂಢ ಬಿಜೆಪಿಯು 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.
ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗಾಂಧಿನಗರ ಕ್ಷೇತ್ರದಿಂದ ಗೃಹ ಸಚಿವ ಅಮಿತ್ ಶಾ ಸ್ಪರ್ಧೆ ಮಾಡಲಿದ್ದಾರೆ. ಮೊದಲ ಪಟ್ಟಿಯಲ್ಲಿ ಸಚಿವರಾದ ರಾಜನಾಥ ಸಿಂಗ್, ಸ್ಮೃತಿ ಇರಾನಿ ಅವರ ಹೆಸರಿದೆ. ಲೋಕಸಭಾಧ್ಯಕ್ಷ ಓಂ ಬಿರ್ಲಾ ಹಾಗೂ ಇಬ್ಬರು ಮಾಜಿ ಮುಖ್ಯಮಂತ್ರಿಗಳು
ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರ ರಾಷ್ಟ್ರ ರಾಜಕಾರಣಕ್ಕೆ ಮತ್ತೆ ಮರಳಲು ಭೂಮಿಕೆ ಸಿದ್ಧವಾಗಿದೆ. ಅವರು ಈ ಹಿಂದೆ ಸಂಸದರಾಗಿದ್ದ ವಿದಿಶಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಗುರುವಾರ ರಾತ್ರಿ 11ರಿಂದ ಶುಕ್ರವಾರ ಬೆಳಿಗ್ಗೆ 4 ಗಂಟೆಯವರೆಗೆ ಸಭೆ ನಡೆಸಿ ಮೊದಲ ಪಟ್ಟಿಗೆ ಅಂತಿಮ ರೂಪ ನೀಡಿತ್ತು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಅವರು ಶನಿವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಹುರಿಯಾಳುಗಳ ಹೆಸರನ್ನು ಪ್ರಕಟಿಸಿದರು. ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಹಲವು ಸಂಸದರಿಗೆ ಕೊಕ್ ನೀಡಲಾಗಿದೆ.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೇರಳದ ತಿರುವನಂತಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಡಿದ್ದವು. ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಅವರು ತಿರುವನಂತಪುರದ ಸಂಸದರಾಗಿದ್ದಾರೆ. ರಾಜೀವ್ ರಾಜ್ಯಸಭಾ ಅವಧಿ ಏಪ್ರಿಲ್‌ಗೆ ಮುಗಿಯಲಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಮಾಡಿತ್ತು. ಈ ಸಲ ರಾಜ್ಯದಲ್ಲಿ ಖಾತೆ ತೆರೆಯಲೇಬೇಕು ಎಂದು ತಂತ್ರ ರೂಪಿಸಿರುವ ಪಕ್ಷವು ಘಟಾನುಘಟಿ ನಾಯಕರನ್ನು ಹುರಿಯಾಳುಗಳನ್ನಾಗಿ ಮಾಡಿದೆ. ನಟ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯ ಸುರೇಶ್ ಗೋಪಿ ತ್ರಿಶೂರ್‌ನಿಂದ, ಕಳೆದ ವರ್ಷವಷ್ಟೇ ಕಮಲ ಪಾಳಯಕ್ಕೆ ಸೇರಿದ್ದ ಅನಿಲ್ ಆ್ಯಂಟನಿ (ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ. ಆ್ಯಂಟನಿ ಪುತ್ರ) ಪತ್ತನಂತಿಟ್ಟ ಕ್ಷೇತ್ರದಿಂದ, ಕೇಂದ್ರ ಸಚಿವ ವಿ.ಮುರಳೀಧರನ್ ಅಟ್ಟಿಂಗಲ್‌ನಿಂದ ಸ್ಪರ್ಧಿಸಲಿದ್ದಾರೆ.
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಕ್ಕೆ ಮುನ್ನವೇ ದುರ್ಬಲ ಕ್ಷೇತ್ರಗಳಿಗೆ ಪಕ್ಷವು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿತ್ತು. ಈ ಪ್ರಯೋಗದಿಂದ ಪಕ್ಷ ಭಾರಿ ಯಶಸ್ಸು ಗಳಿಸಿತ್ತು. ಇದೇ ಪ್ರಯೋಗವನ್ನು ಕೇರಳದಲ್ಲಿ ಮಾಡಲು ಪಕ್ಷ ಮುಂದಾಗಿದೆ.
ದೆಹಲಿಯ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಹಾಲಿ ಸಂಸದರಾದ ರಮೇಶ್ ಬಿಧೂಢಿ, ಪರ್ವೇಶ್ ಶರ್ಮಾ, ಮೀನಾಕ್ಷಿ ಲೇಖಿ ಹಾಗೂ ಹರ್ಷವರ್ಧನ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈ ಮೂಲಕ ದೆಹಲಿಯಲ್ಲಿ ಬಹು ದೊಡ್ಡ ಬದಲಾವಣೆ ಮಾಡಿದೆ. ಲೇಖಿ ಕೇಂದ್ರ ಸಚಿವರು. ಹರ್ಷವರ್ಧನ್ ಈ ಹಿಂದೆ ಆರೋಗ್ಯ ಸಚಿವರಾಗಿದ್ದರು. ಬಿಧೂಢಿ ಅವರು ಸಂಸತ್ತಿನಲ್ಲಿಯೇ ಕೋಮು ದ್ವೇಷದ ಮಾತು ಆಡಿದ್ದರು.
ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರು ನವದೆಹಲಿ ಕ್ಷೇತ್ರದಿಂದ ಚುನಾವಣಾ ರಾಜಕಾರಣಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಕಮಲಜಿತ್ ಸೆಹ್ರಾವತ್ ಪಶ್ಚಿಮ ದೆಹಲಿಯಿಂದ, ಶಾಸಕ ರಾಮ್ವೀರ್ ಸಿಂಗ್ ಬಿಧೂಢಿ ದಕ್ಷಿಣ ದೆಹಲಿಯಿಂದ, ಪ್ರವೀಣ್ ಖಂಡೇಲವಾಲ್ ಚಾಂದಿನಿ ಚೌಕ್‌ನಿಂದ ಹಾಗೂ ಹಾಲಿ ಸಂಸದ ಮನೋಜ್ ತಿವಾರಿ ಅವರು ಈಶಾನ್ಯ ದೆಹಲಿಯಿಂದ ಸ್ಪರ್ಧಿಸುವರು.
ಉಗ್ರ ಹಿಂದುತ್ವದ ಪ್ರತಿಪಾದಕಿಯಾದ ಭೋಪಾಲ್‌ನ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಅವರಿಗೂ ಟಿಕೆಟ್ ನಿರಾಕರಿಸಲಾಗಿದೆ. ಟಿಕೆಟ್ ವಂಚಿತ ಮತ್ತೊಬ್ಬ ಕೇಂದ್ರ ಸಚಿವರೆಂದರೆ ಜಾನ್ ಬಾರ್ಲಾ. ಭೋಜ್‌ಪುರಿ ಗಾಯಕ ಮತ್ತು ನಟ ಪವನ್ ಸಿಂಗ್ ಅವರು ಪಶ್ಚಿಮ ಬಂಗಾಳದ ಅಸನ್ಸೋಲ್‌ನಿಂದ ಕಣಕ್ಕಿಳಿಯಲಿದ್ದಾರೆ.
ಕೇಂದ್ರ ಸಚಿವರಾದ ಮನ್ಸುಖ್ ಮಾಂಡವೀಯ, ಜಿತೇಂದ್ರ ಸಿಂಗ್, ಸರ್ಬಾನಂದ ಸೊನೊವಾಲ್, ಗಜೇಂದ್ರ ಸಿಂಗ್ ಶೆಖಾವತ್, ಭೂಪೇಂದರ್ ಯಾದವ್, ಜಿ.ಕಿಶನ್ ರೆಡ್ಡಿ, ಕಿರಣ್ ರಿಜಿಜು, ಜ್ಯೋತಿರಾದಿತ್ಯ ಸಿಂಧಿಯಾ, ಅರ್ಜುನ್ ರಾಮ್ ಮೇಘವಾಲ್ ಹಾಗೂ ಅರ್ಜುನ್ ಮುಂಡಾ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪ್ರಮುಖರು. ಮಾಂಡವೀಯ, ಭೂಪೇಂದರ್ ಯಾದವ್ ಹಾಗೂ ಸಿಂಧಿಯಾ ರಾಜ್ಯಸಭಾ ಸದಸ್ಯರಾಗಿದ್ದಾರೆ. ಮಾಂಡವೀಯ ಹಾಗೂ ಯಾದವ್ ಅವಧಿ ಏಪ್ರಿಲ್‌ಗೆ ಮುಗಿಯಲಿದೆ. ಸಿಂಧಿಯಾ ಅವರು 2019ರ ಚುನಾವಣೆಯಲ್ಲಿ ಸೋತಿದ್ದರು.
ಪಕ್ಷಾಂತರಿಗಳಿಗೆ ಮಣೆ: ಪಕ್ಷಾಂತರಿಗಳಿಗೆ ಮೊದಲ ಪಟ್ಟಿಯಲ್ಲೇ ಜಾಗ ಸಿಕ್ಕಿದೆ. ಉತ್ತರ ಪ್ರದೇಶದ ಅಂಬೇಡ್ಕರ್ ನಗರದಿಂದ ರಿತೇಶ್ ಪಾಂಡೆ ಹಾಗೂ ಜಾರ್ಖಂಡ್‌ನ ಸಿಂಗ್‌ಭೂಮ್‌ನಿಂದ ಗೀತಾ ಕೋಡಾ ಸ್ಪರ್ಧಿಸಲಿದ್ದಾರೆ. ಹಾಲಿ ಸಂಸದರಾದ ಪಾಂಡೆ ಬಿಎಸ್‌ಪಿ ಹಾಗೂ ಕೋಡಾ ಕಾಂಗ್ರೆಸ್‌ನಲ್ಲಿದ್ದರು. ಕೆಲವು ದಿನಗಳ ಹಿಂದೆ ಕಮಲ ಪಾಳಯಕ್ಕೆ ಜಿಗಿದಿದ್ದರು.
ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಮಾರ್ಚ್ 10ರ ನಂತರ ಪ್ರಕಟಿಸುವ ನಿರೀಕ್ಷೆ ಇದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಮುಂದಿನ ವಾರ ಮತ್ತೆ ಸಭೆ ಸೇರಲಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸುವ ಸಂಭವವಿದೆ.
ಬಿಜೆಪಿ ಮೊದಲ ಪಟ್ಟಿ
ಉತ್ತರ ಪ್ರದೇಶ; 52
ಮಧ್ಯಪ್ರದೇಶ; 24
ಪಶ್ಚಿಮ ಬಂಗಾಳ; 20
ಗುಜರಾತ್; 15
ರಾಜಸ್ಥಾನ; 15
ಕೇರಳ; 12
ಅಸ್ಸಾಂ; 11
ಜಾರ್ಖಂಡ್; 11
ಛತ್ತೀಸಗಢ; 11
ತೆಲಂಗಾಣ; 9
ದೆಹಲಿ; 5
ಜಮ್ಮು ಮತ್ತು ಕಾಶ್ಮೀರ; 2
ಉತ್ತರಾಖಂಡ; 2
ಅರುಣಾಚಲ ಪ್ರದೇಶ; 2
ಗೋವಾ; 1
ತ್ರಿಪುರ; 1
ಅಂಡಮಾನ್ ಮತ್ತು ನಿಕೋಬಾರ್; 1
ದಿಯು ಮತ್ತು ದಮನ್; 1
ಪಟ್ಟಿ ವೈಶಿಷ್ಟ್ಯ
*28 ಮಹಿಳಾ ಅಭ್ಯರ್ಥಿಗಳು
*50 ವರ್ಷದೊಳಗಿನ 47 ಹುರಿಯಾಳುಗಳು
ಜಾತಿವಾರು
ಪರಿಶಿಷ್ಟ ಜಾತಿ; 27
ಪರಿಶಿಷ್ಟ ಪಂಗಡ; 18
ಇತರ ಹಿಂದುಳಿದ ವರ್ಗ; 57
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.