ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೋಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಿರುವುದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸಿಪಿಐ(ಎಂ), 'ಇದು ಸಂಸತ್ತಿನ ಪಾಲಿಗೆ ಕಪ್ಪುದಿನ' ಎಂದು ಟೀಕಿಸಿದೆ.
ಮಹುವಾ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ಸಿಪಿಐ(ಎಂ) ಕೇಂದ್ರೀಯ ಸಮಿತಿ ಸದಸ್ಯ ಸುಜಾನ್ ಚಕ್ರವರ್ತಿ ಮಾತನಾಡಿದ್ದಾರೆ. ಇದು 'ಅತಿಯಾದ ವರ್ತನೆ' ಎಂದಿರುವ ಅವರು, ಬಿಜೆಪಿಯು ತನಗಿರುವ ಬಹುಮತವನ್ನು ಕ್ರೂರವಾಗಿ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.
ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸುವ ಸಂಬಂಧ ನೀತಿ ಸಮಿತಿಯು ಇಂದು (ಶುಕ್ರವಾರ) ವರದಿ ಮಂಡಿಸಿತ್ತು. ಅದರಂತೆ, ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲಾಗಿದೆ.
ಇದು 'ನ್ಯಾಯಸಮ್ಮತವಲ್ಲ' ಎಂದಿರುವ ಚಕ್ರವರ್ತಿ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮಾಡಿರುವ ಆರೋಪಗಳಿಗೆ ಪ್ರತ್ಯುತ್ತರ ನೀಡಲು ಮಹುವಾ ಅವರಿಗೆ ಅವಕಾಶವನ್ನೇ ನೀಡಿಲ್ಲ ಎಂದು ದೂರಿದ್ದಾರೆ.
ಮೊಯಿತ್ರಾ ಅವರು ಭಾರತದಲ್ಲಿ ಇದ್ದಾಗಲೇ ಅವರ ಸಂಸತ್ ಲಾಗಿನ್ ಮತ್ತು ಪಾಸ್‌ವರ್ಡ್ ದುಬೈನಲ್ಲಿ ಬಳಕೆಯಾಗಿದೆ. ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರವೇ (ಎನ್ಐಸಿ) ತನಿಖಾ ಸಂಸ್ಥೆಗಳಿಗೆ ಈ ಮಾಹಿತಿ ನೀಡಿದೆ. ಸಂಸದೆ ಹಣಕ್ಕಾಗಿ ದೇಶದ ಭದ್ರತೆಯನ್ನೇ ಒತ್ತೆ ಇಟ್ಟಿದ್ದಾರೆ ಎಂದು ದುಬೆ ಆರೋಪಿಸಿದ್ದರು.
ಮಹುವಾ ವಿರುದ್ಧ ಉದ್ಯಮಿ ಅಫಿಡವಿಟ್
ಮಹುವಾ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಸಭೆಯ ನೀತಿ ಸಮಿತಿಗೆ ಈಗಾಗಲೇ ಅಫಿಡವಿಟ್ ಸಲ್ಲಿಸಿರುವ ಉದ್ಯಮಿ ದರ್ಶನ್ ಹಿರನಂದಾನಿ, ತಮ್ಮ ಸಂಸತ್ ಸದಸ್ಯತ್ವ ಇ–ಮೇಲ್ ಐ.ಡಿ ಅನ್ನು ಮೊಹುವಾ ಅವರು ನನಗೆ ನೀಡಿದ್ದರು. ಆ ಮೂಲಕ ಅವರಿಗೆ ಮಾಹಿತಿ ಕಳುಹಿಸುತ್ತಿದ್ದೆ. ಅದರಂತೆ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ತಿಳಿಸಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಿಸುಮುರಿಸು ಉಂಟು ಮಾಡುವ ಉದ್ದೇಶದಿಂದ ಅವರು ಉದ್ಯಮಿ ಗೌತಮ್ ಅದಾನಿ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು' ಎಂದೂ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.