ADVERTISEMENT

ಚಳಿಗಾಲದ ಅಧಿವೇಶನ: ಮತ್ತೆ 49 ಸಂಸದರ ಅಮಾನತು; ಒಟ್ಟು ಸಂಖ್ಯೆ 141ಕ್ಕೆ ಏರಿಕೆ

ಪಿಟಿಐ
Published 19 ಡಿಸೆಂಬರ್ 2023, 8:06 IST
Last Updated 19 ಡಿಸೆಂಬರ್ 2023, 8:06 IST
<div class="paragraphs"><p>ನವದೆಹಲಿಯ ಸಂಸತ್ ಭವನದ ಎದುರು ಅಮಾನತುಗೊಂಡ ವಿರೋಧ ಪಕ್ಷಗಳ ಸಂಸರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು</p></div>

ನವದೆಹಲಿಯ ಸಂಸತ್ ಭವನದ ಎದುರು ಅಮಾನತುಗೊಂಡ ವಿರೋಧ ಪಕ್ಷಗಳ ಸಂಸರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು

   

ಪಿಟಿಐ ಚಿತ್ರ

ನವದೆಹಲಿ: ಡಿ. 13ರಂದು ಲೋಕಸಭೆಯಲ್ಲಿ ಸಂಭವಿಸಿದ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ಉತ್ತರಕ್ಕೆ ಒತ್ತಾಯಿಸುತ್ತಿರುವ ವಿರೋಧ ಪಕ್ಷಗಳ 49 ಸದಸ್ಯರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಂಗಳವಾರ ಅಮಾನತು ಮಾಡಿದ್ದಾರೆ.

ADVERTISEMENT

ಇದರೊಂದಿಗೆ ಚಳಿಗಾಲದ ಅಧಿವೇಶನದಲ್ಲಿ ಒಟ್ಟು ಅಮಾನತು ಆದ ಸಂಸದರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಸೋಮವಾರ ಕಲಾಪ ಮುಗಿಯುವವರೆಗೆ ರಾಜ್ಯಸಭೆ ಮತ್ತು ಲೋಕಸಭೆಯಿಂದ ಒಟ್ಟು 92 ಸಂಸದರನ್ನು ಅಮಾನತು ಮಾಡಲಾಗಿತ್ತು.

ಮಂಗಳವಾರ ಅಮಾನತು ಆದವರಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ ಫಾರೂಕ್ ಅಬ್ದುಲ್ಲಾ ಹಾಗೂ ಕಾಂಗ್ರೆಸ್ ಮುಖಂಡರಾದ ಶಶಿ ತರೂರ್‌, ಮನೀಶ್ ತಿವಾರಿ ಅವರೂ ಸೇರಿದ್ದಾರೆ.

ಲೋಕಸಭೆಯಲ್ಲಿನ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ಬೇಡಿಕೆ ಇಟ್ಟು ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ‘ದ ಸದಸ್ಯರು ಕಳೆದ ಕೆಲ ದಿನಗಳಿಂದ ತೀವ್ರ ಒತ್ತಡ ಹೇರುತ್ತಿದ್ದಾರೆ. ಫಲಕ ಹಿಡಿದು ಮತ್ತು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೋಮವಾರ 78 ಸದಸ್ಯರ ಅಮಾನತು

ಸಂಸತ್‌ನ ಭದ್ರತಾ ವೈಫಲ್ಯ ವಿಷಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಗೆ ಪಟ್ಟು ಹಿಡಿದು ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ 78 ಸದಸ್ಯರನ್ನು ಸೋಮವಾರ ಅಮಾನತು ಮಾಡಲಾಗಿತ್ತು.

ಅಶಿಸ್ತಿನ ವರ್ತನೆ ಹಾಗೂ ಸಭಾಪತಿ ನಿರ್ದೇಶನಗಳನ್ನು ಧಿಕ್ಕರಿಸಿದ ಕಾರಣಕ್ಕೆ ರಾಜ್ಯಸಭೆಯ 45 ಸದಸ್ಯರನ್ನು ಅಮಾನತುಗೊಳಿಸಲಾಗಿದೆ. 34 ಸದಸ್ಯರನ್ನು ಚಳಿಗಾಲದ ಉಳಿದ ಅಧಿವೇಶನದ ಅವಧಿಗೆ ಹೊರ ಹಾಕಲಾಗಿದೆ. 11 ಸದಸ್ಯರ ನಡವಳಿಕೆ ಪ್ರಕರಣವನ್ನು ಸದನದ ಹಕ್ಕುಬಾಧ್ಯತಾ ಸಮಿತಿಗೆ ನೀಡಲಾಗಿದ್ದು, ಆ ವರದಿ ಬರುವವರೆಗೆ ಸದನದಿಂದ ದೂರ ಉಳಿಯುವಂತೆ ಸೂಚಿಸಲಾಗಿದೆ. 

ಅಮಾನತು, ವಿಪಕ್ಷಗಳ ಗದ್ದಲ, ಕೋಲಾಹಲದ ನಡುವೆಯೇ ದೂರಸಂಪರ್ಕ ಮಸೂದೆಯಂತಹ ಪ್ರಮುಖ ಮಸೂದೆಗಳನ್ನು ಕೇಂದ್ರ ಸರ್ಕಾರ ಮಂಡಿಸಿತು. ಕೇಂದ್ರಾಡಳಿತ ಪ್ರದೇಶ ಪುದುಚೆರಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ 33ರಷ್ಟು ಮಹಿಳಾ ಮೀಸಲಾತಿ ನೀಡುವ ಮಸೂದೆಗಳಿಗೆ ಹೆಚ್ಚಿನ ಚರ್ಚೆಯಿಲ್ಲದೆಯೇ ಅಂಗೀಕಾರ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.