ADVERTISEMENT

ಲೋಕಸಭೆ ಚುನಾವಣೆ: ಹ್ಯಾಟ್ರಿಕ್‌ ಗೆಲುವೊ, ಅಚ್ಚರಿ ಫಲಿತವೊ?

ಮತ ಎಣಿಕೆಗೆ ಸಕಲ ಸಿದ್ಧತೆ: ‘ಹ್ಯಾಟ್ರಿಕ್‌’ ಸಾಧಿಸುವರೇ ಮೋದಿ?

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 0:46 IST
Last Updated 4 ಜೂನ್ 2024, 0:46 IST
<div class="paragraphs"><p>ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ</p></div>

ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ

   

ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ‘ಹ್ಯಾಟ್ರಿಕ್‌‘ ಗೆಲುವಿನ ವಿಶ್ವಾಸದಲ್ಲಿದ್ದರೆ, ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದೆ.

ಬಿಜೆಪಿಯು ಅಧಿಕಾರವನ್ನು ಉಳಿಸಿಕೊಂಡರೆ ಮೋದಿ ಅವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ದಾಖಲೆ ಸರಿಗಟ್ಟಲಿದ್ದಾರೆ. ನೆಹರೂ ತಮ್ಮ ಪಕ್ಷವನ್ನು ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಗೆಲುವಿನತ್ತ ಮುನ್ನಡೆಸಿದ್ದರು.

ADVERTISEMENT

ಮುಂದಿನ ಐದು ವರ್ಷ ದೇಶದ ಆಡಳಿತದ ಚುಕ್ಕಾಣಿ ಹಿಡಿಯುವವರು ಯಾರು ಎಂಬ ಸ್ಪಷ್ಟ ಚಿತ್ರಣ ಮಂಗಳವಾರ ಸಂಜೆಯ ವೇಳೆ ಲಭ್ಯವಾಗುವ ಸಾಧ್ಯತೆಯಿದೆ. 542 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ 8,360 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಒಂದು ಕ್ಷೇತ್ರದಲ್ಲಿ (ಗುಜರಾತ್‌ನ ಸೂರತ್‌) ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿಯು 370 ಸ್ಥಾನ ಮತ್ತು ಎನ್‌ಡಿಎ ಕೂಟವು 400ರ ಗಡಿ ತಲುಪಲಿದೆಯೇ, ಕಾಂಗ್ರೆಸ್‌ ಕಳೆದ ಒಂದು ದಶಕದ ನಿರಾಸೆಯ ಬಳಿಕ ಪುಟಿದೆದ್ದು ನಿಲ್ಲಲಿದೆಯೇ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ. 2014 ಮತ್ತು 2019ರ ಚುನಾವಣೆಗಳಲ್ಲಿ ಕಾಂಗ್ರೆಸ್‌ ಶೇ 10ರಷ್ಟು ಸ್ಥಾನಗಳನ್ನು ಗೆಲ್ಲಲೂ ವಿಫಲವಾಗಿತ್ತು.

ಎನ್‌ಡಿಎ ಮೈತ್ರಿಕೂಟ ಭಾರಿ ಗೆಲುವು ದಾಖಲಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಆದರೆ ‘ಇಂಡಿಯಾ’ ಕೂಟದ ಪಕ್ಷಗಳು ಸಮೀಕ್ಷೆಯನ್ನು ‘ಸರ್ಕಾರಿ ಪ್ರಾಯೋಜಿತ’ ಎಂದು ತಳ್ಳಿಹಾಕಿದ್ದು, ತಮಗೆ 295 ಸ್ಥಾನಗಳು ದೊರೆಯುವ ವಿಶ್ವಾಸ ವ್ಯಕ್ತಪಡಿಸಿವೆ. 

ಮತ ಎಣಿಕೆ ಪ್ರಕ್ರಿಯೆ ಬಿಗಿಭದ್ರತೆಯೊಂದಿಗೆ ಬೆಳಿಗ್ಗೆ 8ಕ್ಕೆ ಆರಂಭವಾಗಲಿದೆ. ಮತದಾನದ ವೇಳೆ ಹಿಂಸಾಚಾರ ನಡೆದಿದ್ದ ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಎಣಿಕೆ ಪ್ರಕ್ರಿಯೆಗೆ 70 ರಿಂದ 80 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ತಿಳಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಹಲವು ರಾಜ್ಯಗಳಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ. ಮತ ಎಣಿಕೆ ನಂತರದ 15 ದಿನಗಳವರೆಗೂ ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ.

ಬಿಜೆಪಿ ಮುಖಂಡರ ಸಭೆ

ಮತ ಎಣಿಕೆ ಮುನ್ನಾದಿನವಾದ ಸೋಮವಾರ ಕೇಂದ್ರ ಸಚಿವ ಅಮಿತ್‌ ಶಾ ಒಳಗೊಂಡಂತೆ ಬಿಜೆಪಿಯ ಹಿರಿಯ ಮುಖಂಡರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಸಭೆ ಸೇರಿ, ರಾಜಕೀಯ ಸ್ಥಿತಿ ಕುರಿತು ಚರ್ಚಿಸಿದರು. ಪಕ್ಷದ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆಗೆ ಬೇಕಾದ ಅಗತ್ಯ ಸಿದ್ಧತೆಗಳು ನಡೆದಿವೆ.  

ಪ್ರಧಾನಿ ಮೋದಿ ಅವರು ಮಂಗಳವಾರ ಬೆಳಿಗ್ಗೆ ತಮ್ಮ ಕ್ಷೇತ್ರ, ವಾರಾಣಸಿಗೆ ಪ್ರಯಾಣಿಸುವ ಸಾಧ್ಯತೆಯಿದೆ. ಸಂಜೆಯ ವೇಳೆಗೆ ಅವರು ಪಕ್ಷದ ಕೇಂದ್ರ ಕಚೇರಿಗೆ ಬರಲಿದ್ದು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನಡ್ಡಾ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅಲ್ಲದೆ ಕೇಂದ್ರ ಸಚಿವರಾದ ಪೀಯೂಷ್ ಗೋಯಲ್, ಅಶ್ವಿನಿ ವೈಷ್ಣವ್, ಮನ್ಸುಖ್‌ ಮಾಂಡವೀಯ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌, ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ತಾವ್ಡೆ ಮತ್ತು ತರುಣ್‌ ಚುಘ್ ಪಾಲ್ಗೊಂಡರು.

ಪಕ್ಷ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬ ಬಗ್ಗೆ ನಡೆದಿರುವ ಆಂತರಿಕ ಮೌಲ್ಯಮಾಪನದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಮತ್ತು ಫಲಿತಾಂಶದ ದಿನ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ನಿಭಾಯಿಸಬೇಕಾದರೆ ಜವಾಬ್ದಾರಿಗಳ ವಿವರವಾದ ಯೋಜನೆ ರೂಪಿಸಲಾಯಿತು. ಎಲ್ಲ ಏಳು ಹಂತಗಳ ಮತದಾನದ ಬಗ್ಗೆ ಪರಾಮರ್ಶೆ ಕೂಡಾ ನಡೆಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.