ಕೋಲ್ಕತ್ತ: ಭಾರತವು ಹಿಂದೂ ರಾಷ್ಟ್ರ ಅಲ್ಲ ಎಂಬುವುದನ್ನು ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ತೋರಿಸಿದೆ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳಿದರು.
ಬುಧವಾರ ಸಂಜೆ ಅಮೆರಿಕದಿಂದ ಕೋಲ್ಕತ್ತಗೆ ಆಗಮಿಸಿದ ವೇಳೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸೇನ್, ‘ಪ್ರತಿ ಚುನಾವಣೆಯ ನಂತರ ಒಂದು ಬದಲಾವಣೆಯನ್ನು ದೇಶ ಬಯಸುತ್ತದೆ’ ಎಂದರು.
‘ಭಾರತವು ಹಿಂದೂ ರಾಷ್ಟ್ರ ಅಲ್ಲ ಎಂದು ಈ ಚುನಾವಣಾ ಫಲಿತಾಂಶ ತೋರಿಸಿದೆ. ಹಿಂದೆ(ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ) ಇದ್ದಂತೆ ವಿಚಾರಣೆಯಿಲ್ಲದೆ ಜನರನ್ನು ಜೈಲಿಗೆ ಹಾಕುವುದು ಮತ್ತು ಶ್ರೀಮಂತರು–ಬಡವರ ನಡುವಿನ ಅಂತರವನ್ನು ಹೆಚ್ಚಿಸುವಂತಹ ಕೆಲವು ಘಟನೆಗಳು ಇನ್ನೂ ಮುಂದುವರೆದಿದೆ. ಇದು ನಿಲ್ಲಬೇಕಿದೆ’ ಎಂದು ಹೇಳಿದರು.
‘ನಾನು ಚಿಕ್ಕವನಿದ್ದಾಗ ಬ್ರಿಟಿಷರು ನನ್ನ ಚಿಕ್ಕಪ್ಪಂದಿರು, ಸೋದರ ಸಂಬಂಧಿಗಳನ್ನು ವಿಚಾರಣೆಯಿಲ್ಲದೆ ಜೈಲಿಗೆ ಹಾಕುತ್ತಿದ್ದರು. ಇದರಿಂದ ಭಾರತ ಮುಕ್ತವಾಗಲಿದೆ ಎಂದು ಆಶಿಸಿದ್ದೆವು. ಆದರೆ ಕಾಂಗ್ರೆಸ್ ಆಡಳಿತದಲ್ಲಿಯೂ ಅದು ಮುಂದುವರಿದಿತ್ತು. ಆದರೆ, ಪ್ರಸಕ್ತ ಸರ್ಕಾರದ ಅವಧಿಯಲ್ಲಿ ಇದು ಅವ್ಯಾಹತವಾಗಿದೆ’ ಎಂದು ಅಸಮಾಧಾನ ಹೊರಹಾಕಿದರು.
ಹೊಸ ಸಂಪುಟದ ಬಗ್ಗೆ ಮಾತನಾಡಿದ ಅವರು, ‘ಸಂಪುಟ ಖಾತೆಗಳಲ್ಲಿ ಅಂತಹ ಬದಲಾವಣೆಗಳೇನು ಆಗಿಲ್ಲ. ಹಿಂದೆ ಇದ್ದವರೆ ಈಗ ಮುಂದುವರಿದಿದ್ದಾರೆ. ಅಲ್ಪಸ್ವಲ್ಪ ಬದಲಾವಣೆ ಮಾಡಿದರೂ ರಾಜಕೀಯವಾಗಿ ಪ್ರಬಲರಾಗಿರುವವರು ಇನ್ನೂ ಪ್ರಬಲರಾಗಿಯೇ ಉಳಿದಿದ್ದಾರೆ’ ಎಂದರು.
ರಾಮಮಂದಿರ ನಿರ್ಮಾಣದ ಹೊರತಾಗಿಯೂ ಬಿಜೆಪಿ ಫೈಜಾಬಾದ್ ಲೋಕಸಭಾ ಸ್ಥಾನವನ್ನು ಕಳೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ತುಂಬಾ ಹಣ ವ್ಯಯಿಸಿ ರಾಮಮಂದಿರ ನಿರ್ಮಿಸಲಾಯಿತು. ಭಾರತವನ್ನು ಹಿಂದೂ ರಾಷ್ಟ್ರ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿತ್ತು. ಇದು ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದೇಶದಲ್ಲಿ ನಡೆಯಬಾರದಿತ್ತು. ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು, ಅದರ ನೈಜ ಗುರುತನ್ನು ಬದಲಾಯಿಸುವ ಯತ್ನಗಳು ನಡೆಯುತ್ತಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.