ನವದೆಹಲಿ: ಲೋಕಸಭಾ ಚುನಾವಣೆಗೆ ರಾಜ್ಯಗಳಲ್ಲಿ ತಯಾರಿ ಬಗ್ಗೆ ಪರಿಶೀಲನೆ ನಡೆಸಲು ಚುನಾವಣಾ ಆಯೋಗವು ಮುಂದಿನ ವಾರ ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ಭೇಟಿ ನೀಡಲಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದಲ್ಲಿ, ಚುನಾವಣಾ ಆಯುಕ್ತರಾದ ಅನೂಪ್ ಚಂದ್ರ ಪಾಂಡೆ ಹಾಗೂ ಅರುಣ್ ಗೋಯಲ್ ಅವರಿರುವ ನಿಯೋಗವು ಜನವರಿ 7 ರಿಂದ 10ರ ನಡುವೆ ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ಭೇಟಿ ನೀಡಲಿದೆ.
ನಿಯೋಗದ ಭೇಟಿಗೂ ಮುನ್ನ ಜನವರಿ 6ರಂದು ಉಪ ಚುನಾವಣಾ ಆಯುಕ್ತರು, ಚುನಾವಣೆ ಸಿದ್ದತೆ ಬಗ್ಗೆ ಅವರಿಗೆ ಮಾಹಿತಿ ನೀಡಲಿದ್ದಾರೆ.
ಈಗಾಗಲೇ ಉಪ ಚುನಾವಣಾ ಆಯುಕ್ತರು ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯಗಳಿಗೆ ಪ್ರವಾಸ ಮಾಡಿ, ರಾಜಕೀಯ ಪಕ್ಷಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಆಡಳಿತ ಅಧಿಕಾರಿಗಳನ್ನು ಭೇಟಿ ಮಾಡುವುದು ಚುನಾವಣಾ ಆಯೋಗದ ಸಾಮಾನ್ಯ ಪ್ರಕ್ರಿಯೆ.
ಆದರೆ ಎಲ್ಲಾ ರಾಜ್ಯಗಳಿಗೆ ಆಯೋಗವು ಭೇಟಿ ನೀಡುವುದು ಅನುಮಾನ ಎನ್ನಲಾಗಿದ್ದು, ಇತ್ತೀಚೆಗೆ ವಿಧಾನಸಭೆ ಚುನಾವಣೆ ನಡೆದಿದ್ದ ರಾಜ್ಯಗಳಿಗೆ ಭೇಟಿ ನೀಡುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.