ನವದೆಹಲಿ: ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್, ಮಾರ್ಚ್ 2ನೇ ವಾರದಿಂದ ಪ್ರಚಾರ ಆರಂಭಿಸಲಿದ್ದು, ವಿವಿಧ ವಯೋಮಾನದವರನ್ನು ತಲುಪಲು ಯೋಜನೆ ರೂಪಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಹಿರಂಗ ಪ್ರಚಾರಕ್ಕೆ ಅಗತ್ಯವಿರುವ ಬೃಹತ್ ಹೋರ್ಡಿಂಗ್‌ಗಳು ಹಾಗೂ ಇನ್ನಿತರ ಪ್ರಚಾರ ಮಾದರಿಗಳನ್ನು ಸಿದ್ಧಪಡಿಸಲು ಎರಡು ಕಂಪನಿಗಳನ್ನು ಕಾಂಗ್ರೆಸ್ ನೇಮಿಸಿಕೊಂಡಿದೆ.
ಮಾಧ್ಯಮ ಪ್ರಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ ಅನುಸರಿಸುತ್ತಿರುವ ಕೇಂದ್ರೀಕೃತ ನಿರ್ಧಾರ ವ್ಯವಸ್ಥೆ ಒಂದೆಡೆಯಾದರೆ, ಕಾಂಗ್ರೆಸ್ ಪಕ್ಷವು ಹಳ್ಳಿ ಮಟ್ಟದಿಂದ ಪ್ರಚಾರ ಆರಂಭಿಸುವ ಮತ್ತು ಸ್ಥಳೀಯ ಮಟ್ಟದಲ್ಲೇ ನಿರ್ಧರಿಸುವ ಯೋಜನೆ ಹೊಂದಿದೆ ಎಂದೆನ್ನಲಾಗಿದೆ.
ಈ ಬಾರಿ ಪ್ರಚಾರದಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ (MSP)ಗೆ ಕಾನೂನು ಮಾನ್ಯತೆ ನೀಡುವುದು ಪ್ರಮುಖವಾಗಿರಲಿದೆ. ರೈತರೊಂದಿಗೆ ಯುವ ಸಮುದಾಯವನ್ನೂ ಗುರಿಯಾಗಿರಿಸಿಕೊಂಡು ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ. ಇದರೊಂದಿಗೆ ರಾಹುಲ್ ಗಾಂಧಿ ಹೇಳಿರುವ ‘ಜಿತ್ನಿ ಆಬಾದಿ, ಉತ್ನಾ ಹಕ್’ (ಜನಸಂಖ್ಯೆ ಎಷ್ಟಿದೆಯೋ, ಅಷ್ಟು ಪ್ರಮಾಣದ ಹಕ್ಕು) ಎಂಬುದನ್ನೇ ಪ್ರಮುಖ ಘೋಷವಾಕ್ಯವನ್ನಾಗಿಸಿಕೊಳ್ಳುವ ಯೋಜನೆಯನ್ನು ಕಾಂಗ್ರೆಸ್ ಹೊಂದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನ ಪ್ರಣಾಳಿಕೆ ಸಮಿತಿಯು ಮಾರ್ಚ್ 4ರಂದು ಸಭೆ ಸೇರಲಿದೆ. ಇದರೊಂದಿಗೆ ಚುನಾವಣಾ ಪ್ರಚಾರವನ್ನು ಇನ್ನಷ್ಟು ಚುರುಕುಗೊಳಿಸಲು ಒಂದು ಲಕ್ಷ ಬೂತ್ ಮಟ್ಟದ ಏಜೆಂಟರನ್ನು ಪಕ್ಷ ನೇಮಿಸಿದೆ.
ಕೇಂದ್ರದಲ್ಲಿ ಕಳೆದ 2 ಅವಧಿಯಿಂದ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ 28 ಪಕ್ಷಗಳು ಜತೆಗೂಡಿ ಇಂಡಿಯಾ ಒಕ್ಕೂಟ ರಚಿಸಿವೆ. ಆದರೆ ತಮ್ಮ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಈವರೆಗೂ ಬಹಿರಂಗಪಡಿಸಿಲ್ಲ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 303 ಸಂಸದರನ್ನು ಹೊಂದಿತ್ತು. ಕಾಂಗ್ರೆಸ್ 52 ಸ್ಥಾನಗಳನ್ನಷ್ಟೇ ಗೆದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.