ಪಟ್ನಾ: ದುರಂಹಂಕಾರ ಮತ್ತು ತಮ್ಮನ್ನು ಲಘುವಾಗಿ ಪರಿಗಣಿಸುವುದನ್ನು ಸಹಿಸುವುದಿಲ್ಲ ಎಂಬುದನ್ನು ಇತ್ತೀಚಿನ ಲೋಕಸಭಾ ಚುನಾವಣೆಯ ಫಲಿತಾಂಶದ ಮೂಲಕ ಜನ ಸಾಬೀತು ಮಾಡಿದ್ದಾರೆ ಎಂದು ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ತಮ್ಮದೇ ರಾಜಕೀಯ ಪಕ್ಷ ಸ್ಥಾಪಿಸುತ್ತಿರುವ ಹಿನ್ನೆಲೆಯಲ್ಲಿ ಪಿಟಿಐ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಮುನ್ನಡೆಸುವ ಬಗ್ಗೆ ರಾಹುಲ್ ಗಾಂಧಿ ಸಾಮರ್ಥ್ಯದ ಮೇಲಿದ್ದ ಪ್ರಶ್ನೆಗಳನ್ನೂ ಫಲಿತಾಂಶ ತೊಡೆದುಹಾಕಿದೆ. ದೇಶವು ತಮ್ಮನ್ನು ನಾಯಕರನ್ನಾಗಿ ಅಂಗೀಕರಿಸಲು ಲೋಕಸಭೆ ವಿರೋಧ ಪಕ್ಷದ ನಾಯಕರು ಮತ್ತಷ್ಟು ದೂರ ಕ್ರಮಿಸಬೇಕಿದೆ ಎಂದಿದ್ದಾರೆ.
‘ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪುನಶ್ಚೇತನಗೊಳ್ಳಲಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ನಂಬಿಕೆ ಬಂದಿದೆ. ಮತ್ತೊಂದು ಕೋನದಲ್ಲಿ ಯೋಚಿಸುವುದಾದರೆ, ದೇಶ ಅವರನ್ನು ನಾಯಕನೆಂದು ಸಂಪೂರ್ಣವಾಗಿ ಒಪ್ಪಿಕೊಂಡಿದೆಯೇ? ಹಾಗೆಂದು ನನಗನಿಸುವುದಿಲ್ಲ’ಎಂದು ಅವರು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ತಮ್ಮ ಅಭಿಪ್ರಾಯವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,‘ಈ ದೇಶದ ಯಾವೊಬ್ಬ ನಾಯಕನೂ ತಮ್ಮನ್ನು ಹಗುರವಾಗಿ ಪರಿಗಣಿಸಬಾರದು ಎಂಬುದನ್ನು ಜನ ತೋರಿಸಿದ್ದಾರೆ. ಯಾವುದರ ಜೊತೆ ಬೇಕಾದರೂ ಜನ ನಿಲ್ಲುತ್ತಾರೆ. ಆದರೆ, ದುರಹಂಕಾರದ ಪರವಲ್ಲ. ಬಿಜೆಪಿ, ಕಾಂಗ್ರೆಸ್ ಮತ್ತು ಯಾವುದೇ ಪ್ರಾದೇಶಿಕ ಪಕ್ಷವಾಗಲಿ. ಎಲ್ಲೆಲ್ಲಿ ದುರಂಹಕಾರ ಮತ್ತು ಅತಿಯಾದ ಆತ್ಮವಿಶ್ವಾಸ ಕಂಡಿದೆಯೋ ಅಲ್ಲೆಲ್ಲಾ ಜನ ಬುದ್ದಿ ಕಲಿಸಿದ್ದಾರೆ ಎಂದು ಪ್ರಶಾಂತ್ ಹೇಳಿದ್ದಾರೆ.
ಯಾರೊಬ್ಬರೂ ಅಜೇಯರಲ್ಲ ಎಂಬ ಸಂದೇಶವನ್ನು ಫಲಿತಾಂಶ ನೀಡಿದೆ. ಎಲ್ಲ ನಿರೀಕ್ಷೆಗಳನ್ನು ಮೀರಿ ‘ಇಂಡಿಯಾ’ ಬಣವು ಬಲಿಷ್ಠ ಪ್ರದರ್ಶನ ನೀಡಿದೆ ಎಂದಿದ್ದಾರೆ.
ನಿಮಗೆ ಅಧಿಕಾರ ಕೊಟ್ಟರೂ ಅದರಲ್ಲಿ ಕೆಲವು ಕಡಿತಗಳನ್ನು ಮಾಡುತ್ತಿರುವುದಾಗಿ ಜನ ತೋರಿಸಿದ್ದಾರೆ ಎಂದು ಮೋದಿ ಹೆಸರೇಳದೆ ಕಿಶೋರ್ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು,‘ಮೋದಿ ಹೆಸರಿನಲ್ಲಿ ಅನಿವಾರ್ಯವಾಗಿ ಮತ ಬೀಳುತ್ತವೆ ಎಂದು ಬಿಜೆಪಿ ಭಾವಿಸಿತ್ತು. ಆದರೆ, ಮತದಾರರು ತಾವು ಜಾತಿ ಮತ್ತು ಮಂದಿರ, ಮಸೀದಿ ಯಾವುದೇ ವಿಷಯದಲ್ಲಿ ವಿಭಜನೆಯಾಗಿದ್ದರೂ ನಿಮ್ಮನ್ನು ಅರ್ಹ ಸ್ಥಾನದಲ್ಲಿ ಕೂರಿಸುತ್ತೇವೆ ಎಂದು ಸಾಬೀತು ಮಾಡಿದರು’ಎಂದು ಕಿಶೋರ್ ಹೇಳಿದ್ದಾರೆ.
ಕಾಂಗ್ರೆಸ್‌ನಲ್ಲಿ ಇಂದಿರಾ ಗಾಂಧಿ ಮಾಡಿದ ರೀತಿಯೇ ಬಿಜೆಪಿಯಲ್ಲಿ ಮೋದಿ ಸರ್ವಾಧಿಕಾರ ಪ್ರದರ್ಶಿಸುತ್ತಿದ್ದಾರೆ ಎಂಬ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಂದಿರಾ ಗಾಂಧಿಯನ್ನೂ ಜನ ತಿರಸ್ಕರಿಸಿದ್ದರು. ಈಗ ಮೋದಿ ಸಮಯ ಎಂದಿದ್ದಾರೆ.
ಚುನಾವಣೆಯಲ್ಲಿ ರಾಹುಲ್ ಗಾಂಧಿ ಪರಿಶ್ರಮ ಎದ್ದು ಕಾಣುತ್ತಿದೆ. ಲೋಕಸಭೆ ಚುನಾವಣೆಯು ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಇದ್ದ ಸಂಶಯವನ್ನು ತೊಡೆದುಹಾಕಲು ಪಕ್ಷದ ನಾಯಕರಿಗೆ ಸಹಾಯ ಮಾಡಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಮತ್ತಷ್ಟು ಶ್ರಮ ಹಾಕಬೇಕಿದೆ, ಭವಿಷ್ಯದಲ್ಲಿ ಅಧಿಕಾರಕ್ಕೇರುವ ಸಾಮರ್ಥ್ಯ ಪಕ್ಷಕ್ಕಿದೆ ಎಂದಿದ್ದಾರೆ.
ಇಂದಿರಾ ಗಾಂಧಿ ಅವಧಿಯಲ್ಲಿ ದೊಡ್ಡ ಸೋಲು ಅನುಭವಿಸಿದಾಗ ಕಾಂಗ್ರೆಸ್ 154 ಸ್ಥಾನ ಗೆದ್ದಿತ್ತು. ಇದೀಗ, ರಾಹುಲ್ ನೇತೃತ್ವದಲ್ಲಿ 99 ಸ್ಥಾನಗಳನ್ನು ಗೆದ್ದು ಪುನಶ್ಚೇತನಗೊಳ್ಳೂತ್ತಿದೆ. ಇನ್ನೂ ಎಷ್ಟು ದೂರ ಕ್ರಮಿಸಬೇಕಿದೆ ಎಂಬುದು ಅವರಿಗೆ ತಿಳಿದಿದೆ ಎಂದಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.