ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 350ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನುವ ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಿವೆ. ಬಿಜೆಪಿ ಗಳಿಕೆ 300ರ ಸನಿಹಕ್ಕೆ ಬಂದು ನಿಂತಿದೆ. ಮತಗಟ್ಟೆ ಸಮೀಕ್ಷೆಗಳನ್ನು ಮೀರಿ ಇಂಡಿಯಾ ಮೈತ್ರಿಕೂಟ 220ಕ್ಕೂ ಅಧಿಕ ಸ್ಥಾನ ಗಳಿಸಿದೆ. ರಾತ್ರಿ ವೇಳೆಗೆ ಸ್ಪಷ್ಟವಾದ ಚಿತ್ರಣ ಗೊತ್ತಾಗಲಿದೆ. ಸದ್ಯದ ಮಟ್ಟಿಗೆ ಎಲ್ಲಾ ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಿವೆ.
ಮೂರು ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟಕ್ಕೆ 400ಕ್ಕೂ ಅಧಿಕ ಸೀಟುಗಳು ಬರಲಿವೆ ಎಂದು ಅಂದಾಜಿಸಿದ್ದವು. ಎಲ್ಲಾ ಮತಗಟ್ಟೆಗಳ ಸರಾಸರಿ ಎನ್‌ಡಿಎಗೆ 360ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಅವೆಲ್ಲಾ ತಲೆಕೆಳಗಾಗಿವೆ. 2014 ಹಾಗೂ 2019ರಲ್ಲಿ ಏಕಾಂಗಿಯಾಗಿ ಬಹುಮತ ಪಡೆದಿದ್ದ ಬಿಜೆಪಿ, ಈ ಬಾರಿ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.
ಎಲ್ಲಾ ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟದ ಭರ್ಜರಿ ಗೆಲುವಿನ ಬಗ್ಗೆ ಅಂದಾಜಿಸಿದ್ದವು. ಮತಗಟ್ಟೆ ಸಮೀಕ್ಷೆಗಳ ಬಗ್ಗೆ ವಿರೋಧ ಪಕ್ಷಗಳು ಅಪಸ್ವರ ಎತ್ತಿದ್ದವು. ಅವುಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಎತ್ತಿದ್ದವು. ಇದೀಗ ಬಂದಿರುವ ಚುನಾವಣೆ ಫಲಿತಾಂಶವು, ಏಜೆನ್ಸಿಗಳು ಮತದಾರನ ಮನದಾಳ ಅರಿಯುವಲ್ಲಿ ವಿಫಲವಾಗಿದ್ದನ್ನು ಕಾಣಬಹುದು.
ಮತಗಟ್ಟೆ ಸಮೀಕ್ಷೆಗಳನ್ನು ಆಧರಿಸಿ ಫಲಿತಾಂಶದ ಭವಿಷ್ಯ ನುಡಿದ ಪ್ರಮುಖ ಸಂಸ್ಥೆಗಳು ಹಾಗೂ ಅವರು ನೀಡಿದ್ದ ಸೀಟುಗಳ ಸಂಖ್ಯೆ ಕೆಳಗಿದೆ.
ಸಂಸ್ಥೆ | ಎನ್‌ಡಿಎ | ಇಂಡಿಯಾ | ಇತರೆ |
---|---|---|---|
ಇಂಡಿಯಾ ಟುಡೆ– ಆಕ್ಸಿಸ್ ಮೈಇಂಡಿಯಾ | 361–401 | 131–166 | 8–10 |
ಸಿ– ವೋಟರ್ | 353–383 | 152–182 | 4–12 |
ಟುಡೇಸ್ ಚಾಣಕ್ಯ | 385–415 | 96–118 | 27–45 |
ಸಿಎನ್‌ಎಕ್ಸ್ | 371–401 | 109–139 | 28–38 |
ಇಟಿಜಿ | 358 | 132 | 53 |
ಪೋಲ್ ಆಫ್ ಪೋಲ್ಸ್ | 379 | 136 | 28 |
ನೈಜ ಫಲಿತಾಂಶ (ಸಂಜೆ 4.30ಕ್ಕೆ) | 294 | 232 | 17 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.