ನವದೆಹಲಿ: ಕೆಲ ದಿನಗಳಿಂದ ಲೋಕಸಭೆಯಲ್ಲಿ ನಡೆಯುತ್ತಿರುವ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಬುಧವಾರದ ಬೆಳಗಿನ ಜಾವ 1 ಗಂಟೆವರೆಗೆ ಮುಂದುವರೆದಿತ್ತು.
ಬಹುತೇಕ ಸದಸ್ಯರು ತಮ್ಮ ಮಾತು ಮುಗಿಸಿದ ಬಳಿಕ ಸಭಾಪತಿ ಓಂ ಬಿರ್ಲಾ ಬೆಳಿಗ್ಗೆ 1 ಗಂಟೆಗೆ ಲೋಕಸಭೆ ಕಲಾಪವನ್ನು ಮುಗಿಸಿದರು.
ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಚರ್ಚೆ ಮೇಲಿನ ಪ್ರಶ್ನೆಗಳಿಗೆ ಬುಧವಾರ ಸಂಜೆ ಉತ್ತರ ನೀಡಲಿದ್ದಾರೆ.
ಸಾಮಾನ್ಯವಾಗಿ ಲೋಕಸಭೆ ಕಲಾಪ ಸಂಜೆ 4 ರಿಂದ 9 ಗಂಟೆವರೆಗೆ ಇರುತ್ತದೆ. ಆದರೆ, ಚರ್ಚೆಯಲ್ಲಿ ಭಾಗವಹಿಸುವ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದರಿಂದ ಮಂಗಳವಾರದ ಕಲಾಪವನ್ನು ಬುಧವಾರ ಬೆಳಗಿನ ಜಾವ 1 ಗಂಟೆವರೆಗೆ ನಡೆಸಲಾಯಿತು.
ಜನವರಿ 29 ರಂದು ಬಜೆಟ್ ಅಧಿವೇಶನದ ಮೊದಲ ದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.
ಮಂಗಳವಾರದ ಚರ್ಚೆ ವೇಳೆ ವಿಪಕ್ಷಗಳ ಸದಸ್ಯರು ಅಹಂ ಬಿಟ್ಟು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಚರ್ಚೆಯ ಸಂದರ್ಭಮಾತನಾಡಿದ ಕಾಂಗ್ರೆಸ್‌ನ ಪ್ರಣೀತ್ ಕೌರ್ ಪ್ರತಿಭಟನೆಗೆ ನಾಂದಿ ಹಾಡಿದ ಮೂರು ಕಾಯಿದೆಗಳನ್ನು ‘ಕಪ್ಪು ಕಾನೂನು’ ಎಂದು ಕರೆದರು. ಅವುಗಳನ್ನು ಕೂಡಲೇ ರದ್ದುಗೊಳಿಸುವಂತೆ ಸರ್ಕಾರವನ್ನು ಕೋರಿದರು.
ಪ್ರತಿಭಟನಾನಿರತ ರೈತರ ವಿರುದ್ಧ ಕೆಲವು ಜನರು ಬಳಸಿದ "ಖಲಿಸ್ತಾನಿ" ಮತ್ತು "ಮಾವೋವಾದಿಗಳು" ಎಂಬ ಹೇಳಿಕೆಗಳನ್ನು ಉಲ್ಲೇಖಿಸಿದ ಅವರು, ಪ್ರತಿಭಟನಾಕಾರರ ಸಹೋದರರು ಸೈನಿಕರಾಗಿದ್ದು, ಗಾಲ್ವಾನ್ ಕಣಿವೆಯಲ್ಲಿ ಚೀನಿಯರೊಂದಿಗಿನ ಘರ್ಷಣೆಯಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ ಎಂದರು.
"ಈ ಸರ್ಕಾರವು ನಮ್ಮ ಪ್ರಜಾಪ್ರಭುತ್ವಕ್ಕೆ ನಿಜವಾದ ಬೆದರಿಕೆಯಾಗಿದೆ, ರೈತರಲ್ಲ" ಎಂದು ಕಿಡಿ ಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.