ನವದೆಹಲಿ: ‘ಸಂಸತ್ತಿನ ಎಲ್ಲಾ ಸದಸ್ಯರೂ ಕುಳಿತುಕೊಂಡೇ ಮಾತನಾಡಬೇಕು. ಕೊರೊನಾ ವೈರಾಣು ಹರಡುವ ಅಪಾಯವಿರುವುದರಿಂದ ಕಡ್ಡಾಯವಾಗಿ ಅಂತರ ಕಾಪಾಡಿಕೊಳ್ಳಬೇಕು’ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸೂಚಿಸಿದರು.
18 ದಿನಗಳ ಮುಂಗಾರು ಅಧಿವೇಶನಸೋಮವಾರ ಆರಂಭವಾಗಿದ್ದು ಮೊದಲ ದಿನ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಲೋಕಸಭೆ ಕಲಾಪ ನಡೆಯಿತು. ಮಧ್ಯಾಹ್ನ 3ರಿಂದ ರಾಜ್ಯಸಭೆ ಕಲಾಪ ನಿಗದಿಯಾಗಿದೆ. ಇತರ ದಿನಗಳಲ್ಲಿ ಬೆಳಗಿನ ಅವಧಿಯಲ್ಲಿ ನಾಲ್ಕು ಗಂಟೆಗಳ ಕಾಲ ರಾಜ್ಯಸಭೆ ಹಾಗೂ ಸಂಜೆ ಲೋಕಸಭೆ ಕಲಾಪಗಳು ಜರುಗಲಿವೆ.
‘ಸದಸ್ಯರ ಸುರಕ್ಷತೆ ಹಾಗೂ ಅನುಕೂಲದ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಎರಡೂ ಸದನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕೆಲ ಸದಸ್ಯರಿಗೆ ಸಂದರ್ಶಕರ ಗ್ಯಾಲರಿಯಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಬಿಕ್ಕಟ್ಟಿನ ಕಾರಣ ಈ ಕ್ರಮ ಕೈಗೊಳ್ಳಲಾಗಿದ್ದು ಕಲಾಪವು ಸುಗಮವಾಗಿ ನಡೆಯಲು ಎಲ್ಲರೂ ಸಹಕರಿಸಬೇಕು’ ಎಂದು ಸ್ಪೀಕರ್ ಬಿರ್ಲಾ ತಿಳಿಸಿದರು.
‘ಸಂಸತ್ತಿನಲ್ಲಿ ಎಲ್ಲರೂ ಕುಳಿತುಕೊಂಡೇ ಮಾತನಾಡುವುದು ಕಡ್ಡಾಯ. ತಜ್ಞರ ಸಲಹೆ ಮೇರೆಗೆ ಈ ಕ್ರಮ ಕೈಗೊಂಡಿದ್ದೇನೆ. ಇದರಿಂದ ನಿಮಗೆಲ್ಲಾ ತುಂಬಾ ತೊಂದರೆಯಾಗಬಹುದು. ಈ ಮಾರ್ಗವನ್ನು ಅನುಸರಿಸದೆ ಬೇರೆ ಆಯ್ಕೆ ನನ್ನ ಎದುರಿಗೆ ಇಲ್ಲ’ ಎಂದೂ ಅವರು ಹೇಳಿದರು.
‘ಕೊರೊನಾ ಕರಿಛಾಯೆಯ ನಡುವೆ ಈ ಬಾರಿಯ ಅಧಿವೇಶನ ನಡೆಯುತ್ತಿದೆ.ಸಂಸತ್ತಿನಲ್ಲಿ ಪಕ್ಷಗಳು ಹೊಂದಿರುವ ಸದಸ್ಯ ಬಲದ ಆಧಾರದಲ್ಲಿ ಆಸನಗಳನ್ನು ಹಂಚಿಕೆ ಮಾಡಲಾಗಿದೆ. ಹೀಗಾಗಿ ಸಚಿವರು ಹಾಗೂ ಸಂಸದರು ತಮಗೆ ನಿಗದಿಮಾಡಿರುವ ಸಂಖ್ಯೆಯ ಆಸನಗಳಲ್ಲೇ ಕುಳಿತುಕೊಳ್ಳಬೇಕು. ಇದು ನಿಮ್ಮಲ್ಲಿ ನಾನು ಮಾಡುತ್ತಿರುವ ವಿನಂತಿ’ ಎಂದರು.
‘ಕೊರೊನಾವನ್ನು ಮಣಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಗ್ಗೂಡಿ ಹೋರಾಡುತ್ತಿವೆ’ ಎಂದೂ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.