ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ರಾಜಕೀಯ ಗಣ್ಯರ ಜೀವನಾಧಾರಿತ ಸಿನಿಮಾಗಳು ಈ ಬಾರಿಯ ಲೋಕಸಭಾ ಚುನಾವಣೆ ಸಮಯದಲ್ಲಿ ಜೋರಾಗಿಯೇ ಸದ್ದು ಮಾಡುತ್ತಿವೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಶಿವಸೇನಾ ವರಿಷ್ಠ ಬಾಳಾ ಠಾಕ್ರೆ, ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿಗಳಾದ ಎನ್.ಟಿ. ರಾಮರಾವ್ ಹಾಗೂ ವೈ.ಎಸ್. ರಾಜಶೇಖರ ರೆಡ್ಡಿ ಅವರ ಜೀವನ ಕುರಿತ ಚಿತ್ರಗಳು ಈಗಾಗಲೇ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ಕಂಡಿವೆ.
ನರೇಂದ್ರ ಮೋದಿ ಅವರನ್ನು ಕುರಿತ ‘ಪಿಎಂ ನರೇಂದ್ರ ಮೋದಿ’ ಹಾಗೂ ರಾಹುಲ್ ಜೀವನ ಆಧರಿತ ‘ಮೈ ನೇಮ್ ಈಸ್ ರಾಗಾ’ ಚಿತ್ರಗಳು ಚುನಾವಣೆಯ ಮಧ್ಯಭಾಗದ ಹೊತ್ತಿಗೆ ತೆರೆಗೆ ಅಪ್ಪಳಿಸಲು ಸಜ್ಜಾಗಿವೆ. ಈ ಇಬ್ಬರು ಪ್ರಧಾನಿ ಹುದ್ದೆಯ ಪ್ರಮುಖ ಆಕಾಂಕ್ಷಿಗಳು. ಈ ಸಿನಿಮಾಗಳು ಚುನಾವಣಾ ಪ್ರಚಾರಕ್ಕೆ ಹೊಸ ಆಯಾಮ ನೀಡಲಿವೆ ಎನ್ನಲಾಗಿದೆ.
ಮೋದಿ ಕುರಿತ ಚಿತ್ರಕ್ಕೆ ಕಾಂಗ್ರೆಸ್, ಡಿಎಂಕೆ ಹಾಗೂ ಸಿಪಿಎಂ ವಿರೋಧ ವ್ಯಕ್ತಪಡಿಸಿವೆ. ಚಿತ್ರ ಬಿಡುಗಡೆ ಮಾಡಿದರೆ, ಏಪ್ರಿಲ್ 11ರಿಂದ ಆರಂಭವಾಗಲಿರುವ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಆಕ್ಷೇಪ ಎತ್ತಿವೆ. ಹೀಗಾಗಿಏಪ್ರಿಲ್ 12ರಂದು ಬಿಡುಗಡೆಗೆ ಸಜ್ಜಾಗಿದ್ದ ಚಿತ್ರತಂಡ ಏಪ್ರಿಲ್ 5ರಂದೇ ಬಿಡುಗಡೆ ಮಾಡಲು ನಿರ್ಧರಿಸಿದೆ.
ಚಿತ್ರವನ್ನು ವಿಮರ್ಶೆಗೆ ಒಳಪಡಿಸಲು ರಾಜಕೀಯ ಪಕ್ಷಗಳಿಗೆ ಅವಕಾಶ ನೀಡಬೇಕು ಎಂದು ಕರ್ನಾಟಕ ಕಾಂಗ್ರೆಸ್ ಘಟಕವು ಚುನಾವಣಾ ಆಯೋಗವನ್ನುಕೋರಿದೆ.
ರೂಪೇಶ್ ಪಾಲ್ ನಿರ್ದೇಶನದ ‘ಮೈ ನೇಮ್ ಈಸ್ ರಾಗಾ’ ಬಿಡುಗಡೆಯ ಹೊಸ್ತಿಲಲ್ಲಿದೆ. ಅಶ್ವಿನಿ ಕುಮಾರ್ ಅವರು ರಾಹುಲ್ ಗಾಂಧಿ ಪಾತ್ರದಲ್ಲಿ, ಹಿಮಂತ್ ಕಪಾಡಿಯಾ ಅವರು ಮೋದಿಯಾಗಿ ಹಾಗೂ ಅನುಪಮ್ ಖೇರ್ ಅವರ ಸಹೋದರ ರಾಜು ಖೇರ್ ಅವರು ಮನಮೋಹನ್ ಸಿಂಗ್ ಆಗಿ ಚಿತ್ರದ ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಇಂದಿರಾ ಗಾಂಧಿ ಕುರಿತ ವೆಬ್ ಸೀರಿಸ್‌ನಲ್ಲಿ ವಿದ್ಯಾ ಬಾಲನ್ ಅವರು ಇಂದಿರಾ ಪಾತ್ರ ಮಾಡುತ್ತಿದ್ದರೆ, ಜಯಲಲಿತಾ ಕುರಿತ ಚಿತ್ರದಲ್ಲಿ ನಿತ್ಯಾ ಮೆನನ್ ಇದ್ದಾರೆ.
ಜೀವನಾಧರಿತ ಚಿತ್ರ;ರಾಜಕೀಯ ನಾಯಕರು:
ಪಿಎಂ ನರೇಂದ್ರ ಮೋದಿ- ನರೇಂದ್ರ ಮೋದಿ
ಮೈ ನೇಮ್ ಈಸ್ ರಾಗಾ- ರಾಹುಲ್ ಗಾಂಧಿ
ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್-ಮನಮೋಹನ್ ಸಿಂಗ್
ಠಾಕ್ರೆ;ಶಿವಸೇನಾ ವರಿಷ್ಠ – ಬಾಳಾ ಠಾಕ್ರೆ
ಎನ್‌ಟಿಆರ್ ಕಥಾನಾಯಕುಡ– ಎನ್.ಟಿ. ರಾಮರಾವ್
ಯಾತ್ರಾ– ವೈ.ಎಸ್. ರಾಜಶೇಖರ ರೆಡ್ಡಿ
ದಿ ತಾಷ್ಕೆಂಟ್ ಫೈಲ್ಸ್– ಲಾಲ್ ಬಹದ್ದೂರ್ ಶಾಸ್ತ್ರಿ
ದಿ ಐರನ್ ಲೇಡಿ– ಇಂದಿರಾ ಗಾಂಧಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.