ನವದೆಹಲಿ: ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆ ನಡುವೆ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಶುಕ್ರವಾರ ಭಾಷಣ ಮಾಡಿದರು.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ಕಾಂಗ್ರೆಸ್, ಡಿಎಂಕೆ, ಸಿಪಿಎಂ, ಸಿಪಿಐ ಮತ್ತು ಆರ್‌ಜೆಡಿ ಸೇರಿದಂತೆ ಇತರ ವಿರೋಧ ಪಕ್ಷಗಳ ನಾಯಕರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.
ಈ ಎಲ್ಲ ನಾಯಕರು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿಯೂ ಒಂದೇ ಸಾಲಿನಲ್ಲಿ ಕುಳಿತುಕೊಂಡರು. ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಅಜಾದ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮುಂದಿನ ಸಾಲಿನಲ್ಲಿ ಮೀಸಲಿಡಲಾಗಿದ್ದ ಆಸನಗಳಲ್ಲಿ ಕುಳಿತುಕೊಳ್ಳಲು ನಿರಾಕರಿಸಿ ವಿರೋಧ ಪಕ್ಷಗಳ ಸಂಸದರ ಜತೆ ಐದನೇ ಸಾಲಿನಲ್ಲಿ ಕುಳಿತರು. ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರು ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರುದ್ಧ ಭಿತ್ತಿ ಫಲಕ ಪ್ರದರ್ಶಿಸಿದರು.
‘ಸಂವಿಧಾನದ ಮೇಲೆ ದಾಳಿ ನಡೆದಿರುವುದನ್ನು ಪ್ರತಿಭಟಿಸಿ ಈ ಕಪ್ಪು ಪಟ್ಟಿ ಧರಿಸಲಾಗಿದೆ’ ಎಂದು ವಿರೋಧ ಪಕ್ಷಗಳ ನಾಯಕರು ಹೇಳಿದರು.
ಇದಕ್ಕೂ ಮೊದಲು ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು, ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.
ಮಹಾತ್ಮ ಗಾಂಧೀಜಿ ಆಶಯದಂತೆ ಸಿಎಎ ಜಾರಿ
ನವದೆಹಲಿ: ಸಂಪ್ರದಾಯದಂತೆ ಬಜೆಟ್ ಅಧಿವೇಶನದ ಆರಂಭದ ದಿನ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಸರ್ಕಾರದ ನಿಲುವು ಸಮರ್ಥಿಸಿಕೊಂಡು, ಮಹಾತ್ಮ ಗಾಂಧಿ ಆಶಯ ಇದೇ ಆಗಿತ್ತು ಎಂದು ಪ್ರತಿಪಾದಿಸಿದರು.
ಪಾಕಿಸ್ತಾನದಲ್ಲಿ ವಾಸಿಸಲು ಬಯಸದ ಹಿಂದೂಗಳು, ಸಿಖ್ಖರು ಭಾರತದಲ್ಲಿ ನೆಲೆಸಲು ಅವಕಾಶ ಕಲ್ಪಿಸಬೇಕು ಎಂದು ಮಹಾತ್ಮ ಗಾಂಧೀಜಿ ಅವರು ದೇಶ ವಿಭಜನೆ ಬಳಿಕ ಸಲಹೆ ನೀಡಿದ್ದರು. ಇವರಿಗೆ ಸಾಮಾನ್ಯ ಬದುಕು ನಡೆಸಲು ಅನುಕೂಲ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ. ಗಾಂಧೀಜಿ ಅವರ ಆಶಯವನ್ನು ಸಂಸತ್ ಪೂರ್ಣಗೊಳಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಹಲವು ರಾಷ್ಟ್ರೀಯ ನಾಯಕರು ಮತ್ತು ರಾಜಕೀಯ ಪಕ್ಷಗಳು ಸಹ ಗಾಂಧೀಜಿ ಅವರ ಆಶಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಭಾರತ ಸದಾ ಎಲ್ಲ ಧರ್ಮಗಳನ್ನು ಸಮಾನ ಗೌರವದಿಂದ ಕಾಣುತ್ತಿದೆ. ಆದರೆ, 1947ರಲ್ಲಿ ನಡೆದ ವಿಭಜನೆ ಸಂದರ್ಭದಲ್ಲಿ ಈ ತತ್ವಕ್ಕೆ ಧಕ್ಕೆಯಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.
ಚರ್ಚೆಗಳು ಪ್ರಜಾಪ್ರಭುತ್ವವವನ್ನು ಬಲಿಷ್ಠಗೊಳಿಸುತ್ತವೆ. ಆದರೆ, ಪ್ರತಿಭಟನೆ ಹೆಸರಿನಲ್ಲಿ ನಡೆಯುವ ಹಿಂಸಾಚಾರ ದುರ್ಬಲಗೊಳಿಸುತ್ತದೆ ಎಂದು ಎಚ್ಚರಿಕೆಯ ಸಂದೇಶ ನೀಡಿದರು.
ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿರುವುದರಿಂದ ಭಾರತದಲ್ಲಿ ಆಶ್ರಯಪಡೆದವರಿಗೆ ಪೌರತ್ವ ನೀಡುವುದರಿಂದ ಯಾವುದೇ ಧರ್ಮದ ಸಾಂಸ್ಕೃತಿಕ ಆಚರಣೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಪ್ರತಿಪಾದಿಸಿದರು.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಅಂತರರಾಷ್ಟ್ರೀಯ ಸಮುದಾಯ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಂಸದರು ಸಹ ಇಂತಹ ವಿಷಯಗಳನ್ನು ಅಂತರರಾಷ್ಟ್ರೀಯ ಸಮುದಾಯದ ಗಮನಕ್ಕೆ ತರಲು ಯತ್ನಿಸಬೇಕು ಎಂದು ಹೇಳಿದರು.
ರಾಷ್ಟ್ರಪತಿ ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿಷಯವನ್ನು ಪ್ರಸ್ತಾಪಿಸುತ್ತಿದ್ದಂತೆ ವಿರೋಧ ಪಕ್ಷದಲ್ಲಿನ ಕೆಲವು ಸದಸ್ಯರು ’ನಾಚಿಕೆಯಾಗಬೇಕು’ ಎಂದು ಘೋಷಣೆ ಹಾಕಿ ಭಿತ್ತಿಫಲಕಗಳನ್ನು
ಪ್ರದರ್ಶಿಸಿದರು.
ಸಿಎಎ ಸಾಧನೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿರುವ ಸರ್ಕಾರ, ಈ ವಿಷಯವನ್ನು ಭಾಷ<br/>ಣದಲ್ಲಿಯೂ ಪ್ರಸ್ತಾಪಿಸಿ ರಾಷ್ಟ್ರಪತಿ ಹುದ್ದೆಯ ಘನತೆಗೆ ಧಕ್ಕೆ ತಂದಿದೆ
– ಗುಲಾಂ ನಬಿ ಅಜಾದ್, ರಾಜ್ಯಸಭೆಯ ಕಾಂಗ್ರೆಸ್ ನಾಯಕ
ಸಿಎಎ ವಿಷಯದಲ್ಲಿ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ. ಅಲ್ಪಸಂಖ್ಯಾತರು ಸಹ ನಮ್ಮವರೇ. ಎನ್‌ಡಿಎ ನಾಯಕರು ಸಿಎಎ ಪರ ದೃಢವಾಗಿ ನಿಲ್ಲಬೇಕು.
– ನರೇಂದ್ರ ಮೋದಿ, ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.