ಪುಣೆ: ಇಲ್ಲಿನ ಲೋಣಾವಳ ವಲಯದ ಭುಶಿ ಅಣೆಕಟ್ಟಿನ ಬಳಿಯ ಜಲಪಾತದಲ್ಲಿ ಮಹಿಳೆ ಮತ್ತು ನಾಲ್ವರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಬೆನ್ನಲ್ಲೇ ಪುಣೆ ಜಿಲ್ಲಾಡಳಿತ ಪ್ರವಾಸಿಗರಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಪಶ್ಚಿಮ ಘಟ್ಟಗಳಲ್ಲಿರುವ ಮಾವಲ್, ಮುಲ್ಶಿ, ಖೇಡ್, ಜುನ್ನಾರ್, ಭೋರ್, ವೆಲ್ಹಾ ಮತ್ತು ಅಂಬೇಗಾಂವ್ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಪ್ರವಾಸಿ ತಾಣಗಳಲ್ಲಿನ ಸಂಭಾವ್ಯ ಅಪಾಯಗಳನ್ನು ಗುರುತಿಸಲು ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನದಿ, ಸರೋವರ, ಅಣೆಕಟ್ಟು, ಜಲಪಾತ, ಕೋಟೆ, ಅರಣ್ಯ ಪ್ರದೇಶಗಳಂತಹ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿಷೇಧಿತ ಪ್ರದೇಶಗಳಿಗೆ ಎಚ್ಚರಿಕೆ ಫಲಕಗಳನ್ನು ಅಳವಡಿಸಲು ತಿಳಿಸಲಾಗಿದ್ದು, ಯಾವ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲವೋ ಅಂತಹ ತಾಣಗಳಿಗೆ ಪ್ರವಾಸಿಗರ ಭೇಟಿಯನ್ನು ರದ್ದುಗೊಳಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ನೀರಿನ ಪ್ರದೇಶಗಳಲ್ಲಿ ರಕ್ಷಣಾ ದೋಣಿಗಳು, ಲೈಫ್ ಗಾರ್ಡ್‌ಗಳು ಮತ್ತು ಲೈಫ್ ಜಾಕೆಟ್‌ಗಳನ್ನು ಒದಗಿಸಬೇಕು ಎಂದು ಕಂದಾಯ, ಅರಣ್ಯ, ರೈಲ್ವೆ, ನಗರ ಪಾಲಿಕೆ ಮತ್ತು ಪಿಡಬ್ಯೂಡಿ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ. ಸಂಜೆ 6 ಗಂಟೆಯ ನಂತರ ಕಾಡಿನ ಪ್ರದೇಶಗಳಿಗೆ ಪ್ರವಾಸಿಗರನ್ನು ಅನುಮತಿಸಲಾಗುವುದಿಲ್ಲ ಎಂದು ದಿವಾಸೆ ತಿಳಿಸಿದ್ದಾರೆ.
ಭಾನುವಾರ ಭುಶಿ ಅಣೆಕಟ್ಟಿನ ಸಮೀಪದ ಜಲಪಾತಕ್ಕೆ ವಿಹಾರಕ್ಕೆಂದು ಹೋಗಿದ್ದ 16– 17 ಮಂದಿ ಜನರಲ್ಲಿ ಮಹಿಳೆ ಹಾಗೂ ನಾಲ್ವರು ಮಕ್ಕಳು ಜಲಪಾತದಲ್ಲಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಹೋಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.