ADVERTISEMENT

ಅಮರನಾಥ ಯಾತ್ರೆ ಮುಕ್ತಾಯ: 4.70 ಲಕ್ಷ ಭಕ್ತರು ಭೇಟಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2023, 13:36 IST
Last Updated 31 ಆಗಸ್ಟ್ 2023, 13:36 IST
ಅಮರನಾಥ ಯಾತ್ರೆ
ಅಮರನಾಥ ಯಾತ್ರೆ   

ಶ್ರೀನಗರ: 62 ದಿನಗಳ ಸುದೀರ್ಘ ಅಮರನಾಥ ಯಾತ್ರೆ ಗುರುವಾರ ಮುಕ್ತಾಯಗೊಂಡಿದ್ದು, ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಶಿವನ ದೇಗುಲಕ್ಕೆ ಈ ಬಾರಿ 4.70 ಲಕ್ಷ ಭಕ್ತರು ಯಾತ್ರೆ ಕೈಗೊಂಡಿದ್ದರು. 

ಯಾತ್ರೆಯ ಕೊನೆ ದಿನದಂದು ಮಹಂತ್ ದೀಪೇಂದ್ರ ಗಿರಿ ಅವರು ಅಮರನಾಥ ಗುಹೆ ದೇವಾಲಯದಲ್ಲಿ ಪೂಜೆಯ ನೇತೃತ್ವ ವಹಿಸಿದ್ದರು. ಎರಡು ತಾಸು ಪೂಜೆ ನಡೆಯಿತು. 

ಅಮರನಾಥ ಗುಹೆಯಲ್ಲಿ ಸ್ವಾಭಾವಿಕವಾಗಿ ಮೂಡುವ ಹಿಮದ ಶಿವಲಿಂಗ ದರ್ಶನದ ವಾರ್ಷಿಕ ಯಾತ್ರೆ ಜುಲೈ 1ರಿಂದ ಆರಂಭವಾಗಿತ್ತು. ಯಾತ್ರೆಯು ಅನಂತ್‌ನಾಗ್ ಮತ್ತು ಗಂಡರ್ಬಾಲ್ ಜಿಲ್ಲೆಗ‌ಳ ಪಹಲ್ಗಾಮ್‌ ಮತ್ತು ಬಲ್‌ತಾಲ್‌ ಮಾರ್ಗಗಳಲ್ಲಿ ಏಕಕಾಲದಲ್ಲಿ ಪ್ರಾರಂಭವಾಯಿತು. 

ADVERTISEMENT

ಅಧಿಕಾರಿಗಳ ಪ್ರಕಾರ, ಆಗಸ್ಟ್ 22 ರವರೆಗೆ 4.70 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಪ್ರತಿಕೂಲ ವಾತಾವರಣದಿಂದಾಗಿ ಆಗಸ್ಟ್ 22 ರ ನಂತರ ತೀರ್ಥಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷ ವಿವಿಧ ಆರೋಗ್ಯ ಕಾರಣಗಳಿಂದಾಗಿ 46 ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದರೆ, ಕಳೆದ ವರ್ಷ 71 ಮಂದಿ ಮೃತಪಟ್ಟಿದ್ದರು. 

2022 ರಲ್ಲಿ 43 ದಿನಗಳ ಕಾಲ ನಡೆದ ಯಾತ್ರೆಯಲ್ಲಿ 3.65 ಲಕ್ಷ ಭಕ್ತರು ಭಾಗವಹಿಸಿದ್ದರು. 2019 ರಲ್ಲಿಒಟ್ಟು 3.42 ಲಕ್ಷ ಭಕ್ತರು ಭಾಗವಹಿಸಿದ್ದರು. ಕೋವಿಡ್ -19 ಕಾರಣಕ್ಕೆ 2020 ಮತ್ತು 2021 ರಲ್ಲಿ ಯಾತ್ರೆಯನ್ನು  ರದ್ದುಗೊಳಿಸಲಾಗಿತ್ತು.

ಈ ವರ್ಷ ಯಾತ್ರೆಯಲ್ಲಿ ಅಮೆರಿಕ, ನೇಪಾಳ, ಸಿಂಗಪುರ, ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ಪ್ರಜೆಗಳು  ಭಾಗವಹಿಸಿದ್ದರು. ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಬಾಲಿವುಡ್ ನಟಿ ಸಾರಾ ಅಲಿ ಖಾನ್, ಆಧ್ಯಾತ್ಮಿಕ ಗುರು ರಮಾನಂದಾಚಾರ್ಯ ಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವು ಗಣ್ಯರು ಪವಿತ್ರ ಗುಹೆಗೆ ಭೇಟಿ ನೀಡಿದರು. ಯಾತ್ರೆ ಬಹುತೇಕ ಶಾಂತಿಯುತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.